ಬೆಂಗಳೂರು: ಜ್ಞಾನಪೀಠ ಪ್ರಶಸ್ತಿಗೆ ನಾನು ಯಾವುದೇ ಲಾಬಿ ಮಾಡುವುದಿಲ್ಲ. ಸಹಜವಾಗಿಯೇ ಸಿಕ್ಕರೆ ಖುಷಿಯಿಂದ ಸ್ವೀಕರಿಸುತ್ತೇನೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.
ಸಪ್ನ ಬುಕ್‌ಹೌಸ್ ಹೊರ ತಂದಿರುವ ಕುಂ.ವೀ ಅವರ “ಕಿಲುಬು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನೀಡುವ ಯಾವುದೇ ಅಕಾಡೆಮಿ ಅಧ್ಯಕ್ಷ ಸ್ಥಾನ ಹಾಗೂ ಸೈಟಿಗಾಗಿ ನಾನು ಕಾದು ಕುಳಿತಿಲ್ಲ. ನಮ್ಮೂರಿನಲ್ಲಿ ನನಗೆ ದೇವರು ಕೊಟ್ಟ ಸ್ಥಳವಿದ್ದು, ಯಾವುದೇ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ವ್ಯವಸ್ಥೆ ಹಾಳಾಗಿದ್ದು, ರಾಜ್ಯದಲ್ಲಿ ಎರಡು ವರ್ಷದಿಂದ ಅಧಿಕಾರ ನಡೆಯುತ್ತಿಲ್ಲ. ವಿಧಾನಸೌಧ ಬಿಗ್ ಬಜಾರ್ ರೀತಿಯಲ್ಲಿ ಮಾರಾಟ ಕೇಂದ್ರವಾಗಿದ್ದು, ಕೋಟಿಗೆ ಮುಖಂಡರನ್ನು ಖರೀದಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಟೀಕಿಸಿದರು.
ನನ್ನ ಕಾದಂಬರಿ “ಕಿಲುಬು’ ನಲ್ಲಿ ರಾಜಕೀಯ ವಿಡಂಬಣೆಯಿದ್ದು, ಬಹುಶಃ ಕಾರಂತರ ಬಳಿಕ ಯಾವ ಲೇಖಕರು ಸಹ ರಾಜಕೀಯ ವಿಡಂಬಣೆ ಕುರಿತು ಬರೆದಿರಲಿಲ್ಲ. ಒಬ್ಬ ಲೇಖಕನಾದವನಿಗೆ ಪ್ರಶ್ನಿಸುವ ಹಕ್ಕಿರಬೇಕಿದ್ದಾಗ ಮಾತ್ರ ವಾಸ್ತವ ಸಂಗತಿಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದ ಅವರು, ಕೆಲವು ರಾಜಕಾರಣಿಗಳು ಗೌರಿ ಹತ್ಯೆ ಆರೋಪಿಗಳ ಪರವಾಗಿ ಮಾತನಾಡುವ ಮೂಲಕ ಸಂವಿಧಾನಕ್ಕೆ ದ್ರೋಹವೆಸಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿದರು. ಮುಖ್ಯಮಂತ್ರಿಯಾಗಲು ರಾಜಕೀಯ ಮುಖಂಡರೊಬ್ಬರು ನಡೆಸುವ ರಾಜಕೀಯ ತಂತ್ರಗಾರಿಕೆ ಈ ಕಾದಂಬರಿಯ ಕಥಾ ಹಂದರವಾಗಿದೆ. ಅನಿರೀಕ್ಷಿತವಾಗಿ ಕಾದಂಬರಿ ಮುಕ್ತಾಯಗೊಳ್ಳುತ್ತದೆ. ಆದರೆ, ಈ ರಾಜಕೀಯ ಪರಿಸ್ಥಿತಿ ಒಂದು ರೀತಿಯ ವಿಷ ಚಕ್ರವಿದ್ದಂತೆ ಹೀಗಾಗಿ ಎಲ್ಲಿಗೆ ಮುಗಿಸಿದರೂ ಅಷ್ಟೇ ಅರ್ಥವಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕುಂ.ವೀರಭದ್ರಪ್ಪ ಅವರ ಕೃತಿಗಳು ಸಾಮಾಜಿಕ ನ್ಯಾಯದ ಬಗ್ಗೆ ರಚನೆಯಾಗಿರುವುದರಿಂದ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಶಿಫಾರಸು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು.
-ಡಾ.ಮನು ಬಳಿಗಾರ್, ಕಸಾಪ ಅಧ್ಯಕ್ಷ
ಈವರೆಗೆ ಸಿಕ್ಕಿರುವ ಪ್ರಶಸ್ತಿಗಳಲ್ಲಿ ನಾನು ಖುಷಿ ಕಂಡಿದ್ದೇನೆ. ಹೀಗಾಗಿ ನನಗೆ ಯಾವ ಸೈಟೂ ಬೇಡ. ಕೊನೆಗಾಲದಲ್ಲಿ ಬೇಕಾದ ಆರು-ಮೂರು ಅಡಿ ಜಾಗವನ್ನು ನನ್ನೂರಿನಲ್ಲಿ ದೇವರು ನನಗೆ ಕೊಟ್ಟಿದ್ದಾನೆ.
-ಕುಂ.ವೀರಭದ್ರಪ್ಪ, ಸಾಹಿತಿ