Advertisement

ಶೈಕ್ಷಣಿಕ ಸೌಲಭ್ಯ ಸದ್ಬಳಕೆ ಆಗಲಿ

02:48 PM Jan 09, 2018 | Team Udayavani |

ಮಾನ್ವಿ: ಸರ್ಕಾರಿ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳುವ ಮೂಲಕ ಉನ್ನತ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

371 (ಜೆ) ಕಲಂ ವಿಶೇಷ ಮೀಸಲಾತಿ ಜಾರಿಯಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ತುಂಬ ಅನುಕೂಲವಾಗಿದೆ. ಎಂ.ಬಿ.ಬಿ.ಎಸ್‌. ಸೀಟ್‌ ಸೇರಿದಂತೆ 140 ವಿದ್ಯಾರ್ಥಿಗಳಿಗೆ ಎಂಎಸ್‌ ಸೀಟ್‌ಗಳು ದೊರೆತಿವೆ. ಅಲ್ಲದೆ 89 ಜನರಿಗೆ ಪ್ರೊಬೇಷನರಿ ಹುದ್ದೆಗಳು ದೊರೆತಿವೆ. ಕಾಲೇಜಿನ ಅಭಿವೃದ್ಧಿಗಾಗಿ 1.70 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಶಾಸಕ ಹಂಪಯ್ಯ ನಾಯಕ ಮಾತನಾಡಿ, ಕಾಲೇಜಿನಲ್ಲಿನ ಮೂಲ ಸೌಕರ್ಯ, ಸಮಸ್ಯೆಗಳ ಬಗ್ಗೆ ತಮ್ಮ ಗಮನಕ್ಕೆ ತಂದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು. ನಂತರ ಪ.ಜಾತಿ, ಪ.ಪಂಗಡದ 49 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.

ನಯೋಪ್ರಾ ಅಧ್ಯಕ್ಷ ಸೈ. ಇಲಿಯಾಸ್‌ ಖಾದ್ರಿ, ಪ್ರಾಚಾರ್ಯ ಯಂಕಣ್ಣ, ಜಿಪಂ ಸದಸ್ಯ ಕಿರಿಲಿಂಗಪ್ಪ, ಕಾಲೇಜಿನ ನಿರ್ದೇಶಕ ಪಿ. ತಿಪ್ಪಣ್ಣ ಬಾಗಲವಾಡ ವಕೀಲ, ಈರಮ್ಮ, ಫಕೀರಪ್ಪ ಓಲೇಕಾರ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಪ್ರಾಚಾರ್ಯರು ತರಾಟೆಗೆ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ತಮ್ಮ ಭಾಷಣದ ನಡುವೆ ಕೇಳಿದ ಮಹಿತಿಗೆ ಉತ್ತರಿಸದ ಪ್ರಾಚಾರ್ಯ ಯಂಕಣ್ಣರನ್ನು ವೇದಿಕೆ ಮೇಲೆಯೇ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಭಾಷಣದ ನಡುವೆ ಬೋಸರಾಜು ಪ್ರಾಚಾರ್ಯರನ್ನು ವಿದ್ಯಾರ್ಥಿಗಳ ಮಾಹಿತಿ ಕೇಳಿದರು. ಒಟ್ಟು ವಿದ್ಯಾರ್ಥಿಗಳು, ಕಳೆದ ಪರೀಕ್ಷೆಯಲ್ಲಿ ಹಾಜರು ಮತ್ತು ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ, ಹಾಗೂ ಪರೀಕ್ಷೆಯ ಶೇಕಡಾವಾರು ಫಲಿತಾಂಶ ಎಷ್ಟು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರಚಾರ್ಯರಲ್ಲಿ ಉತ್ತರವೇ ಇರಲಿಲ್ಲ. ಕೋಪಗೊಂಡ ಅವರು, ನಿಮ್ಮಲ್ಲಿ ಸಾಮಾನ್ಯ ಮಾಹಿತಿ ಇಲ್ಲ. ಅಲ್ಲದೆ ಕಾಲೇಜ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡುವುದಿಲ್ಲ. ಅಭಿವೃದ್ಧಿ ಹಾಗೂ ಸಮಸ್ಯೆಗಳ ವರದಿ ನೀಡುವುದಿಲ್ಲ. ಹೀಗಾದರೆ ಕಾಲೇಜಿನ ಅಭಿವೃದ್ಧಿ ಸಾಧ್ಯವಿಲ್ಲ. ನಿಮ್ಮಲ್ಲಿ ಬೇಜವಾಬ್ದಾರಿತನ ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಶಾಸಕ ಹಂಪಯ್ಯ ನಾಯಕ ಕೂಡ ಧ್ವನಿಗೂಡಿಸಿ ಪ್ರಾಚಾರ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next