Advertisement

ಇಂಗ್ಲಿಷ್‌, ಮೊಬೈಲ್‌ ಬಳಸದ ಹೀಗೊಂದು ಚಿತ್ರ!

10:15 AM Jan 10, 2020 | Lakshmi GovindaRaj |

ಪ್ರೇಮ ಮತ್ತು ಯುದ್ಧ ಎರಡು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಸಿಗುವ ಪದಗಳು. ಈ ಎರಡೂ ವಿರುದ್ದ ಪದಗಳನ್ನೇ ಇಲ್ಲೊಂದು ತಂಡ ತಮ್ಮ ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿದೆ. ಅಂದಹಾಗೆ, ಆ ಚಿತ್ರದ ಹೆಸರು “ಪ್ರೇಮಯುದ್ಧಂ’. ಇನ್ನು ಸಾಮಾನ್ಯವಾಗಿ ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳಲ್ಲಿ ಇಂಗ್ಲಿಷ್‌ ಸಂಭಾಷಣೆಗಳು, ಮೊಬೈನ್‌ ಪೋನ್‌ ಬಳಕೆ ಇದ್ದೇ ಇರುತ್ತದೆ. ಆದರೆ ಈ ಚಿತ್ರದ ವಿಶೇಷವೆಂದರೆ, ಪಕ್ಕಾ ಕನ್ನಡದ ಗ್ರಾಮೀಣ ಸೊಗಡಿನಲ್ಲಿ ಸಾಗುವ ಈ ಚಿತ್ರದಲ್ಲಿ, ಎಲ್ಲಿಯೂ ಇಂಗ್ಲಿಷ್‌ ಸಂಭಾಷಣೆ ಮತ್ತು ಮೊಬೈಲ್‌ ಪೋನ್‌ಗಳನ್ನು ಬಳಕೆಯೇ ಮಾಡಿಲ್ಲವಂತೆ!

Advertisement

ಸದ್ಯ ತನ್ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳ ಅಂತಿಮ ಹಂತ ದಲ್ಲಿ ರುವ “ಪ್ರೇಮಯುದ್ಧಂ’ ಚಿತ್ರ ತಂಡ, ಇತ್ತೀಚೆಗೆ ತನ್ನ ಹಾಡುಗಳನ್ನು ಮತ್ತು ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ. ನಟಿ ಸ್ಪರ್ಶ ರೇಖಾ “ಪ್ರೇಮ ಯುದ್ಧಂ’ ಹಾಡುಗಳನ್ನು ಮತ್ತು ಲಿರಿಕಲ್‌ ವಿಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ವೃತ್ತಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿರುವ ಅನಿಲ್‌ “ಪ್ರೇಮಯುದ್ಧಂ’ ಚಿತ್ರದಲ್ಲಿ ನಾಯಕನಾಗಿ ಬಿಗ್‌ಸ್ಕ್ರೀನ್‌ಗೆ ಪರಿಚಯವಾಗುತ್ತಿದ್ದಾರೆ.

ರೀಲ್‌ನಲ್ಲಿ ಪಕ್ಕಾ ಹಳ್ಳಿ ಹುಡುಗನಾಗಿ ಕಾಣಿಸಿಕೊಳ್ಳುತ್ತಿರುವ ಅನಿಲ್‌ಗೆ ಚಿತ್ರದುರ್ಗ ಮೂಲದ ಪಲ್ಲವಿ ನಾಯಕಿಯಾಗಿ ಜೋಡಿ. ಉಳಿದಂತೆ ಬಹುತೇಕ ಹೊಸ ಪ್ರತಿಭೆಗಳು ಚಿತ್ರದ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶ್ರೀಮಂಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಾಮು ನರಹಳ್ಳಿ ಛಾಯಾಗ್ರಹಣ, ಅರವಿಂದ್‌ ಜೆ.ಪಿ ಸಂಕಲನವಿದೆ. ಗುರುಮೂರ್ತಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ಕನ್ನಡಿಗರು ಮತ್ತು ಬೇರೆ ಭಾಷೆಯವರು ನಮ್ಮ ಚಿತ್ರವನ್ನು ವೀಕ್ಷಿಸಲಿ, ಕನ್ನಡದ ಸೊಗಡು ಗೊತ್ತಾಗಲಿ ಎಂಬ ಕಾರಣಕ್ಕೆ ಶುದ್ಧ ಕನ್ನಡ ಶೀರ್ಷಿಕೆ ಇಡಲಾಗಿದೆ. ಒಮ್ಮೆ ನಿರ್ದೇಶಕ, ನಿರ್ಮಾಪಕರು ಒಟ್ಟಾಗಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ ಕಾರು ಕೆಟ್ಟು ನಿಂತುಕೊಳ್ಳುತ್ತದೆ. ಆ ಸಮಯಲ್ಲಿ ಔಪಚಾರಿಕವಾಗಿ ಮಾತನಾಡುವಾಗ ಅಲ್ಲಿನ ಸುಂದರ ಪರಿಸರಲ್ಲಿ ಹುಟ್ಟಿಕೊಂಡಿದ್ದೇ ಈ ಚಿತ್ರದ ಕಥೆ. ಈಗ ಆ ಕಥೆ ಚಿತ್ರವಾಗಿ ಬಿಡುಗಡೆ ಹಂತದವರೆಗೂ ಬಂದು ನಿಂತಿದೆ.

ಹಳ್ಳಿ ಹಿನ್ನಲೆಯ ಶುದ್ಧ ಪ್ರೀತಿ ಕಥೆಯಲ್ಲಿ ಪ್ರೇಮಿಗಳು ಕೇವಲ ಕಣ್ಣಲ್ಲೇ ಪ್ರೀತಿಯ ಭಾವನೆಗಳನ್ನು ತೋರಿಸುತ್ತಾರೆ. ಕನಸಿನಲ್ಲೂ ಹಾಡನ್ನು ತುರುಕಿಲ್ಲ. ಪ್ರೀತಿ ಅಂದರೆ ಹೀಗೂ ಇರಬಹುದಾ ಎಂಬ ಪ್ರಶ್ನೆ ಮೂಡುವಂತ ಸನ್ನಿವೇಶಗಳು ಚಿತ್ರದಲ್ಲಿದೆ. ಅದನ್ನು ತೆರೆಮೇಲೆ ನೋಡಿದಾಗಲೇ ಗೊತ್ತಾಗುತ್ತದೆ’ ಎಂಬ ವಿವರಣೆ ಕೊಡುತ್ತದೆ ಚಿತ್ರತಂಡ. “ಪ್ರೇಮಯುದ್ಧಂ’ ಚಿತ್ರವನ್ನು ಮಂಡ್ಯ, ಪಾಂಡವಾಪುರ, ಕನಕನಮಾರುಡಿ ಹಾಗೂ ಬ್ಯಾಡರಹಳ್ಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆಯಂತೆ. ಫೆಬ್ರವರಿ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next