Advertisement

ಶತಮಾನ ಕಂಡ ಕಾವು ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಪ್ರಾರಂಭ

01:24 AM May 31, 2019 | Team Udayavani |

ಪುತ್ತೂರು: ಮೂರು ವರ್ಷಗಳ ಹಿಂದೆಯೇ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸಿ ಯಶಸ್ವಿಯಾಗಿರುವ ಶತಮಾನ ಕಂಡ ಕಾವು ಸ.ಉ.ಮಾ.ಹಿ.ಪ್ರಾ. ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರಕಾರದಿಂದ ಅನುಮತಿ ದೊರೆತಿದೆ.

Advertisement

1914ರಲ್ಲಿ ಸ್ಥಾಪನೆಗೊಂಡ ಕಾವು ಸರಕಾರಿ ಶಾಲೆ 2004ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿದೆ. ಶಾಲೆಯಲ್ಲಿ ಒಟ್ಟು 13 ಕೊಠಡಿಗಳಿದ್ದು, 8 ಕ್ಲಾಸ್‌ ರೂಮ್‌ಗಳಿವೆ. ಶಾಲೆಗೆ 1.85 ಎಕ್ರೆ ಜಾಗವಿದ್ದು, ವಿಶಾಲವಾದ ಆಟದ ಮೈದಾನವಿದೆ. ಈ ಶಾಲೆಯಲ್ಲಿ ಕೆಲವು ವರ್ಷಗಳಿಂದ ಸರಾಸರಿ 250ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

ಮೊದಲ ಶಾಲೆ
ಸರಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸಿದ ಹೆಗ್ಗಳಿಕೆ ಕಾವು ಸರಕಾರಿ ಶಾಲೆಗಿದೆ. 2016ರಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳು ಆರಂಭವಾದವು. ಕಳೆದ 3 ವರ್ಷಗಳಲ್ಲಿ ಸರಾಸರಿ 60ರಂತೆ ಮಕ್ಕಳು 1ನೇ ತರಗತಿಗೆ ಭಡ್ತಿ ಹೊಂದುತ್ತಿದ್ದಾರೆ. ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳಿಗೆ ಇಬ್ಬರು ಶಿಕ್ಷಕಿಯರು ಹಾಗೂ ಓರ್ವ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1ನೇ ತರಗತಿ ಆಂ.ಮಾ.ಕ್ಕೆ ಶಿಕ್ಷಕರ ನೇಮಕವಾಗಬೇಕಿದೆ.

ಹಲವು ಸೌಲಭ್ಯ
ಈ ಶಾಲೆಯಲ್ಲಿ 2009ರಿಂದ ಹವಾ ನಿಯಂತ್ರಿತ ಸ್ಲಾರ್ಟ್‌ ಕ್ಲಾಸ್‌ ರೂಮ್‌ ಆರಂಭವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ವಿಶಾಲವಾದ ಆಟದ ಮೈದಾನ, ವಾಚನಾಲಯ, ಸೌರವಿದ್ಯುತ್‌ ಘಟಕ, ಬಯೋಗ್ಯಾಸ್‌ ಘಟಕ, ಸುಸಜ್ಜಿತ ಭೋಜನ ಶಾಲೆ, ಗ್ರಂಥಾಲಯ ವ್ಯವಸ್ಥೆ, ಪ್ರಯೋಗ ಸಲಕರಣೆಗಳು ಇವೆ. ಸುಸಜ್ಜಿತ ಶೌಚಾಲಯ ಕೂಡ ಜೂನ್‌ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ರಂಗ ಮಂದಿರ ನಿರ್ಮಾಣ, ಹೊಸ ಕಟ್ಟಡಗಳ ನಿರ್ಮಾಣ ಯೋಜನೆಗಳಿವೆ.

ದತ್ತು ಸ್ವೀಕಾರ
ಕಾವು ಶಾಲಾ ಹಿರಿಯ ವಿದ್ಯಾರ್ಥಿಯಾಗಿರುವ ಸಾಮಾಜಿಕ ಮುಖಂಡ ಹೇಮನಾಥ ಶೆಟ್ಟಿ ಅವರು 3 ವರ್ಷಗಳ ಹಿಂದೆ ಕಾವು ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಅವರ ಮುತುವರ್ಜಿಯಲ್ಲೇ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಆರಂಭಿಸಲಾಗಿದೆ. ಜಿ.ಪಂ. ಶಿಕ್ಷಣ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅವರು ಶಾಲೆಯ ಅಭಿವೃದ್ಧಿಗೆ ಅನುದಾನಗಳನ್ನು ನೀಡಿದ್ದಾರೆ. ಹಲವು ಮಂದಿ ದಾನಿಗಳ ನೆರವಿನಿಂದಲೂ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next