ಮಾಗಡಿ: ತಾಲೂಕಿನ ಕುದೂರು ಹಾಗೂ ತಿಪ್ಪಸಂದ್ರದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಬಿಇಒ ಸಿದ್ದೇಶ್ವರ ತಿಳಿಸಿದರು.
ಬಿಇಒ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ವತಿಯಿಂದ ಪ್ರಾರಂಭಿಸಿರುವ ಪಬ್ಲಿಕ್ ಶಾಲೆಗಳಿಗೆ ದಾಖಲಾತಿ ಪ್ರಾರಂಭವಾಗಿದೆ. ತಿಪ್ಪಸಂದ್ರದಲ್ಲಿ ಈಗಾಗಲೇ 25 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎಲ್ಕೆಜಿಗೆ 20 ಮಕ್ಕಳು ದಾಖಲಾಗಿದ್ದಾರೆ. ಕುದೂರಿನಲ್ಲಿ ಎಲ್ಕೆಜಿಗೆ 10 ಮಕ್ಕಳು ದಾಖಲಾಗಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಗೆ ಒಬ್ಬ ನುರಿತ ವಿಶೇಷ ಶಿಕ್ಷಕರನ್ನು ಹಾಗೂ ಒಬ್ಬರು ಆಯಾರನ್ನು ನೇಮಕ ಮಾಡಲಾಗುತ್ತದೆ. ಈಗಾಗಲೇ ಆಂಗ್ಲ ಮಾಧ್ಯಮ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಬಿಇಒ ಸಿದ್ದೇಶ್ವರ್ ತಿಳಿಸಿದರು.
ಖಾಸಗಿ ಶಾಲೆಗೆ ಸರಿಸಮನವಾಗಿ ಶಿಕ್ಷಣ: ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಮನಾಗಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಇರುವಂತೆ ಮಾಡಲು ಸಮವಸ್ತ್ರ, ಟೈ, ಶೂ, ಬೆಲ್r ಗಳನ್ನು ದಾನಿಗಳ ಸಹಾಯದಿಂದ ವಿತರಿಸಲಾಗುವುದು. ಸರಕಾರಿ ಶಾಲೆಗಳಲ್ಲಿಯೇ ಅಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೊಠಡಿಯನ್ನು ಒದಗಿಸಲಾಗುವುದು ಎಂದ ಅವರು ಖಾಸಗಿ ಶಾಲೆಗಳವರು ಪಠ್ಯ ಪುಸ್ತಕಗಳನ್ನು ತಮಗೆ ಬೇಕಾದವರಿಂದ ಖರೀದಿಸುತ್ತಾರೆ. ಸರ್ಕಾರಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಪಠ್ಯ ಪುಸ್ತಕ ಮಳಿಗೆಯಿಂದ ಉತ್ತಮ ಗುಣ ಮಟ್ಟದ ಪುಸ್ತಕಗಳನ್ನು ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಹೆಚ್ಚು ಆಂಗ್ಲ ಶಾಲೆಗಳಿಗೆ ಮನವಿ: ಮಾಗಡಿ ತಾಲೂಕಿಗೆ ಕೇವಲ 2 ಆಂಗ್ಲ ಮಾಧ್ಯಮ ಶಾಲೆಗಳು ಮಂಜೂರಾಗಿವೆ. ತಾಲೂಕಿಗೆ ಕನಿಷ್ಟವೆಂದರೂ 4 ಆಂಗ್ಲ ಮಾಧ್ಯಮ ಶಾಲೆಗಳ ಅಗತ್ಯ ಇರುವುದರಿಂದ ಮಾಗಡಿ ಪಟ್ಟಣದ ಜಿಕೆಬಿಎಂಎಸ್, ತಿರುಮಲೆ ಶಾಲೆ, ಉರ್ದು ಶಾಲೆ ಹಾಗೂ ಸೋಲೂರು ಶಾಲೆ ಗಳಿಗೆ ಆಂಗ್ಲ ಮಾಧ್ಯಮ ಶಾಲೆಗಳನ್ನು ಮಂಜೂರು ಮಾಡುವಂತೆ ಡಿಡಿಪಿಐ ಅವರಿಗೆ ಪತ್ರ ಬರೆದಿದ್ದು, ಶಾಸಕರ ಗಮನಕ್ಕೂ ಸಹ ತರಲಾಗಿದೆ. ಇನ್ನೂ ಹೆಚ್ಚಿನ ಶಾಲೆಗಳನ್ನು ಮಂಜೂರು ಮಾಡಿಸು ತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ನುಡಿದರು.
ವಿಜೃಂಭಣೆಯಿಂದ ಸರ್ಕಾರಿ ಶಾಲೆಗಳ ಆರಂಭ: ನುರಿತ ಶಿಕ್ಷಕರಿರುವುದರಿಂದ 6ನೇ ತರಗತಿಯಿಂದ ಲೇ 4 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಸರಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳನ್ನು ಸೆಳೆಯುವುದಾಗಿದೆ. ಶಾಲೆಗಳ ಆರಂಭೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಈ ವರ್ಷ ಮಾಗಡಿ ತಾಲೂಕಿನ ಎಲ್ಲ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸ್ಯಾಮ್‌ಸಂಗ್ ಸಂಸ್ಥೆಯ ವರು ಉಚಿತ ನೋಟ್ ಪುಸ್ತಕ ವಿತರಿಸಲು ಮುಂದಾಗಿದ್ದಾರೆ ಎಂದು ಸಿದ್ದೇಶ್ವರ ತಿಳಿಸಿದರು.