Advertisement

ಬಿಸಲಹಳ್ಳಿಯಲ್ಲೂ ಆಂಗ್ಲ ಮಾಧ್ಯಮ ಶಾಲೆ ಭರವಸೆ

10:27 AM Sep 04, 2019 | Team Udayavani |

ಬ್ಯಾಡಗಿ: ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಕರ್ನಾಟಕ ಪಬ್ಲಿಕ್‌ (ಆಂಗ್ಲ ಮಾಧ್ಯಮ) ಶಾಲೆ ಮಂಜೂರು ಮಾಡಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.

Advertisement

ಗ್ರಾಮ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಒಂದನೇ ತರಗತಿಯಿಂದಲೇ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಿದ್ದು, ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ತರಬೇತಿ ಪಡೆದ ಶಿಕ್ಷಕರನ್ನೂ ಸಹ ನಿಯೋಜಿಸುತ್ತಿದೆ ಎಂದರು.

ತಾಲೂಕಿನಲ್ಲಿ ಅತ್ಯಗತ್ಯವಿರುವ ಕೆಲ ಗ್ರಾಮದ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಕೊಠಡಿಗಳ ಕೊರತೆ ಕಂಡು ಬಂದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗುವುದು. ಇದೇ ಮಾದರಿಯಲ್ಲಿ ತಾಲೂಕಿನ ಕೆಲವೊಂದು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ (ಎಲ್ಕೆಜಿ) ಕನ್ನಡ ತರಗತಿಗಳನ್ನೂ ಸಹ ಪ್ರಾರಂಭಿಸಲಾಗಿದೆ ಎಂದರು.

ಮುಖಂಡ ಚಂದ್ರಣ್ಣ ಮುಚ್ಚೆಟ್ಟಿ ಮಾತನಾಡಿ, ಗ್ರಾಮದ ಪ್ರೌಢಶಾಲೆಯಲ್ಲಿ ಪ್ರತಿವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹೆಮ್ಮೆಯ ಸಂಗತಿ. ಕಳೆದ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ದೊರಕಿದ್ದು, ಬೋಧಕ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಆದರೆ, ಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿಗಳ ಸಂಖ್ಯೆ ಕೊರತೆ ಎನಿಸುತ್ತಿದ್ದು, ಹೀಗಾಗಿ ಕೂಡಲೇ ಇನ್ನೆರಡು ಕೊಠಡಿಗಳನ್ನು ಮಂಜೂರು ಮಾಡಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ, ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಶೇ.5ನ್ನೂ ದಾಟಿಲ್ಲ. ಇದಕ್ಕೆ ಪೂರಕವಾಗಿ ಶೇ.100 ಹಾಜರಾತಿಗಾಗಿ ನಮ್ಮೆಲ್ಲ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದರು.

Advertisement

ಇದೇ ಸಂದರ್ಭದಲ್ಲಿ ಶಾಲೆಯ ಕಟ್ಟಡಕ್ಕೆ ಭೂದಾನ ನೀಡಿದ ಶೇಖರಗೌಡ ಗೌಡ್ರ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಮಹಬೂಬಸಾಬ್‌ ನದಾಫ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ತಾಪಂ ಸದಸ್ಯ ಗುಡ್ಡಪ್ಪ ಕೋಳೂರ, ಶಿವಬಸಪ್ಪ ಕುಳೇನೂರ, ರವೀಂದ್ರ ಪಟ್ಟಣಶೆಟ್ಟಿ, ಬಸವರಾಜ ಹಲಗೇರಿ, ಚನವೀರಗೌಡ ಬುಡ್ಡನಗೌಡ್ರ, ಅಂದಾನೆಪ್ಪ ಮುಚ್ಚಟ್ಟಿ, ಅಭಿಯಂತರ ಎಂ.ನಟರಾಜ್‌, ವೈ.ಕೆ.ಮಟಗಾರ ಹಾಗೂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next