ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ವಿಭಾಗ ಆರಂಭಿಸಲು ಬಿ. ಮೂಡ ಗ್ರಾಮ ಅಜ್ಜಿಬೆಟ್ಟು ಸರಕಾರಿ ಹಿ.ಪ್ರಾ. ಶಾಲೆ ಸರಕಾರದ ಅನುಮತಿ ಪಡೆಯಲು ಯಶಸ್ವಿಯಾಗಿದೆ. ಅನುಮತಿ ಜತೆಗೆ ಪ್ರವೇಶ ದಾಖಲಾತಿಯೂ ಆರಂಭಗೊಂಡಿದೆ ಎಂದು ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀಧರ ಅಮೀನ್ ಅಗ್ರಬೈಲು ತಿಳಿಸಿದ್ದಾರೆ.
ಮೇ 24ರಂದು ಶಾಲೆಯಲ್ಲಿ ನಡೆದ ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸಭೆಯಲ್ಲಿ ಮಾಹಿತಿ
ಅವರು ನೀಡಿದರು.
ಏಕೈಕ ಶಾಲೆ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಲು ಆಯ್ಕೆಯಾದ ಏಕೈಕ ಸರಕಾರಿ ಶಾಲೆಯಾಗಿದೆ. ನಗರ ಪ್ರದೇಶದಲ್ಲಿ ಆಂಗ್ಲ ಮಾಧ್ಯಮಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿಕೊಂಡು ಖಾಸಗಿ ಶಾಲೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಇರುವವರಿಗೆ ಈ ಸರಕಾರಿ ಶಾಲೆ ವರದಾನವಾಗಲಿದೆ.
ಬಿ.ಸಿ. ರೋಡ್‌ನ ಪೇಟೆಯಿಂದ ಅನತಿ ದೂರದಲ್ಲಿರುವ ಈ ಶಾಲೆಯಲ್ಲಿ ಅನುಭವಿ ಅಧ್ಯಾಪಕರು ಹಾಗೂ ಕ್ರೀಯಾಶೀಲ ಗೌರವ ಶಿಕ್ಷಕರಿದ್ದಾರೆ. ಕ್ರೀಡೆ, ಯಕ್ಷಗಾನ, ನೃತ್ಯ, ಯೋಗ, ಹೊರಾಂಗಣ ಭೇಟಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದ್ದು, ಜೀವನಾಧಾರಿತ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ರೋಟರಿ ಕ್ಲಬ್ ಹಾಗೂ ದಾನಿಗಳ ಸಹಕಾರದಿಂದ ಶಾಲೆಯ ಎಲ್ಲ ತರಗತಿ ಕೊಠಡಿಗಳಿಗೆ ಟೈಲ್ಸ್ ಆಳವಡಿಸಿ, ಗೋಡೆಗೆ ಆಕರ್ಷಕ ಚಿತ್ತಾರಗಳಿರುವ ಪೈಟಿಂಗ್ಸ್ ಮಾಡಿ ನವೀಕರಿಸಲಾಗಿದೆ. ಶಾಲಾ ಆವರಣದಲ್ಲಿ ಸಿ.ಸಿ. ಕೆಮರಾಗಳನ್ನು ಆಳವಡಿಸಲಾಗಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ. ಬಿಸಿ ನೀರು, ಬಿಸಿಯೂಟ, ಗಾಳಿ, ಬೆಳಕು, ಶೌಚಾಲಯ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಶಾಲಾ ಆಟದ ಮೈದಾನವನ್ನು ಸರ್ವ ಋತುಗಳಲ್ಲಿಯೂ ಉಪಯೋಗಿಸುವಂತೆ ಸುಂದರಗೊಳಿಸಲಾಗುತ್ತಿದೆ.
ಶಿಕ್ಷಣ ಇಲಾಖೆಯು ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಈ ಶಾಲೆಯನ್ನು ಗುರುತಿಸಿದೆ. ಆಂಗ್ಲ ಹಾಗೂ ಕನ್ನಡ ಮಾಧ್ಯಮಕ್ಕೆ ಸೇರಲು ಇಲ್ಲಿ ಮುಕ್ತ ಅವಕಾಶವಿದೆ. ಸರಕಾರದಿಂದ ಉಚಿತವಾಗಿ ಬಿಸಿಯೂಟ, ಉಪಾಹಾರ, ಹಾಲು, ಸಮವಸ್ತ್ರ , ಶೂ-ಸಾಕ್ಸ್, ಪಠ್ಯ ಪುಸ್ತಕ ನೀಡಲಾಗುತ್ತಿದೆ. ಹಳೆ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾಭಿಮಾನಿಗಳ ಸಹಕಾರದಿಂದ ಬರೆಯುವ ಪುಸ್ತಕಗಳು, ಬೆಲ್ಟ್, ಗುರುತಿನ ಚೀಟಿ ಇತ್ಯಾದಿಗಳನ್ನು ಒದಗಿಸಲಾಗುತ್ತಿದೆ.
80 ವರ್ಷಗಳ ಇತಿಹಾಸ ಹೊಂದಿದೆ. ಈ ಶಾಲೆಯಲ್ಲಿ
ಕಳೆದ 3 ವರ್ಷಗಳಿಂದ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದ್ದು, 6 ಹಾಗೂ 7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿದೆ. ಇದೀಗ 1ರಿಂದ 5ನೇ ತರಗತಿಯವರೆಗೂ ಆಂಗ್ಲ ಮಾಧ್ಯಮಕ್ಕೆ ಸರಕಾರ ವಿಶೇಷ ಅನುಮತಿ ನೀಡಿರುವುದರಿಂದ ಈ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ. ಈ ಶಾಲಾ ಆವರಣದೊಳಗಿರುವ 8ರಿಂದ 10ನೇ ತರಗತಿವರೆಗಿನ ಪ್ರೌಢಶಾಲೆಗೆ ಕೂಡ ಕಳೆದ 2 ವರ್ಷಗಳಿಂದ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಅನುಮತಿ ದೊರಕಿರುತ್ತದೆ. ಎಲ್‌ಕೆಜಿ, ಯುಕೆಜಿ ಹಾಗೂ 1ರಿಂದ 10ನೇ ತರಗತಿವರೆಗೆ ಆಂಗ್ಲ ಆಥವಾ ಕನ್ನಡ ಮಾಧ್ಯಮಗಳನ್ನು ಆಯ್ದುಗೊಳ್ಳಲು ಇಲ್ಲಿ ಮುಕ್ತ ಅವಕಾಶವಿರುತ್ತದೆ ಎಂದು ಶಾಲಾಭಿವೃದ್ಧಿ, ಮೇಲುಸ್ತು ವಾರಿ ಸಮಿತಿ ಅಧ್ಯಕ್ಷ ಶ್ರೀಧರ ಅಮೀನ್ ಅಗ್ರಬೈಲು ತಿಳಿಸಿದ್ದಾರೆ.