Advertisement

ಸರ್ಕಾರಿ ಶಾಲೆಗಳಲ್ಲಿನ್ನು ಆಂಗ್ಲ ಮಾಧ್ಯಮ

08:51 AM May 23, 2019 | Team Udayavani |

ಬಸವಕಲ್ಯಾಣ: ತಮ್ಮ ಮಕ್ಕಳನ್ನೂ ಆಂಗ್ಲ ಮಾಧ್ಯಮ ಮತ್ತು ಸಿಬಿಎಸ್‌ಸಿ ಶಾಲೆಗೆ ಸೇರಿಸಬೇಕು ಎಂಬ ಪೋಷಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತಾಲೂಕಿನ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಮತ್ತು (ಸಿಬಿಎಸ್‌ಸಿ) ವಿಷಯ ಒಳಗೊಂಡ ಒಂದು ಕರ್ನಾಟಕ ಪ್ರಬ್ಲಿಕ್‌ ಶಾಲೆಯನ್ನು ಆರಂಭಿಸಲಿದ್ದು, ಯಾವುದೇ ಶುಲ್ಕವಿಲ್ಲದೇ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.

Advertisement

ತಾಲೂಕಿನ ಕಲಖೋರಾ, ಮುಡಿಬಿ, ಎಕಲೂರ ಹಾಗೂ ನಗರದ ಉರ್ದು ಶಾಲೆ ಒಳಗೊಂಡಂತೆ ಒಟ್ಟು ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಆಯ್ಕೆ ಮಾಡಿಕೊಂಡಿದೆ.

2017-18ನೇ ಸಾಲಿನ ಆಯವ್ಯಯ ಘೋಷಣೆಯಂತೆ ಒಂದೇ ಭೌಗೋಳಿಕ ಸ್ಥಳಗಳಲ್ಲಿ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಟ್ಟುಗೂಡಿಸಿ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಲಾಗಿದೆ.

ಆರಂಭದಲ್ಲಿ ಎಲ್ಕೆಜಿ, ಯುಕೆಜಿ ಮತ್ತು 1ನೇ ತರಗತಿಯ ಪ್ರವೇಶ ಪಡೆದುಕೊಳ್ಳಲಾಗುತ್ತಿದ್ದು, ನಂತರ ಹಂತ ಹಂತವಾಗಿ ಉಳಿದ ತರಗತಿಗಳ ಪ್ರವೇಶ ಪಡೆಯಲಾಗುವುದು ಎಂದು ಮುಡಬಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ತುಕರಾಮ ರೊಡ್ಡೆ ಮಾಹಿತಿ ನೀಡಿದ್ದಾರೆ.

ಹಾಗೂ ಮಂಠಾಳ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ಪಿಯುಸಿ ವರೆಗೆ ಸಿಬಿಎಸ್‌ಸಿ ವಿಷಯದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಶಾಲೆಯಲ್ಲಿ ಇರುವ ಸಂಪನ್ಮೂಲ ಬಳಸಿಕೊಂಡು ತರಗತಿಗಳನ್ನು ನಡೆಸಲು ಸಿದ್ಧ ಮಾಡಿಕೊಂಡಿದೆ.

Advertisement

ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುವುದು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸದ್ಯ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಆಯ್ಕೆಯಾದ ಶಿಕ್ಷಕರಿಗೆ ಈಗಾಗಲೇ ಇಂಗ್ಲಿಷ್‌ ವಿಷಯಕ್ಕೆ ಸಂಬಂಧಿಸಿದ ವಿಶೇಷ ತರಬೇತಿ ನೀಡಲಾಗಿದೆ.

ಶಾಲೆಗಳಲ್ಲಿ ಇನ್ನೂ ಹೆಚ್ಚು ಶಿಕ್ಷಕರು ಬೇಕಾದಲ್ಲಿ ಅತಿಥಿ ಶಿಕ್ಷಕರನ್ನು ಮತ್ತು ಸಹಾಯಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಅಲ್ಲಿನ ಎಸ್‌ಡಿಎಂಸಿ ಸಮಿತಿಗೆ ನೀಡಲಾಗಿದೆ. ಏಕೆಂದರೆ ಸಂಬಳವನ್ನು ಅವರ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸವಪ್ಪಾ ಹಳ್ಳದ ಮಾಹಿತಿ ನೀಡಿದ್ದಾರೆ.

ಈ ಶಾಲೆಗಳಲ್ಲಿ ಇಂಗ್ಲಿಷ್‌ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ಪೋಷಕರು ಇಚ್ಛಾನುಸಾರವಾಗಿ ತಮ್ಮ ಮಕ್ಕಳನ್ನು ಯಾವ ಮಾಧ್ಯಮಕ್ಕಾದರೂ ಸೇರಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಧಿಕೃತವಾಗಿ ಮೇ 28ರಿಂದ ಜೂ.8ರ ವರಗೆ ಪ್ರವೇಶ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಆಸಕ್ತರು ಆಯಾ ಸಂಬಂಧ ಪಟ್ಟ ಶಾಲೆಯ ಮುಖ್ಯಗುರುಗಳಿಗೆ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸರ್ಕಾರ ಗ್ರಾಮೀಣ ಭಾಗದ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಆರಂಭಿಸಿದ ಶಾಲೆಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೋಡಬೇಕಾಗಿದೆ.

•ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next