ಬೇತಮಂಗಲ: ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಸಕ್ತ ಸಾಲಿನಿಂದಲೇ ಆರಂಭಿಸಲಾಗಿದೆ ಎಂದು ಡಿಡಿಪಿಐ ರತ್ನಯ್ಯ ಹೇಳಿದರು.
ಗ್ರಾಮದ ಬಳಿಯ ಸುಂದರಪಾಳ್ಯ ಗ್ರಾಪಂನ ಕಳ್ಳಾವಿ ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 24 ಶಾಲೆಗಳಲ್ಲದೆ, ಇತರೆ ಶಾಲೆಗಳಲ್ಲೂ ಕನ್ನಡ ಭಾಷೆ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸಲಾಗುವುದು. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಖಾಸಗಿ ಶಾಲೆಗಳಿಂತಲೂ ಹೆಚ್ಚಿನ ಸೌಲಭ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಎಲ್ಲಾ ಪಠ್ಯೇತರ ಶಿಕ್ಷಣ ನೀಡಲಾಗುತ್ತದೆ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪಿಯು ಕನ್ನಡ ಉಪನ್ಯಾಸಕ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, ದೇಶದ ಅಭಿವೃದ್ಧಿ ಎಂದರೆ ಜನತೆಗೆ ಶಿಕ್ಷಣ ಮತ್ತು ಆರೋಗ್ಯವನ್ನು ಸರ್ಕಾರಗಳು ಸರಿಯಾದ ರೀತಿಯಲ್ಲಿ ಒದಗಿಸುವುದೆಂದು ವಿಶ್ವ ಸಂಸ್ಥೆ ಘೋಷಿಸಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ, ಮುಂದಿನ ದಿನಗಳಲ್ಲಿ ಬಡವರಿಗೆ ಶಿಕ್ಷಣ, ಆರೋಗ್ಯ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳು ಆರಂಭ ಒಳ್ಳೆಯ ಆಲೋಚನೆಯಾಗಿದೆ. ಈಗ ಆರಂಭ ಮಾಡಿರುವ ಕರ್ನಾಟಕ ಪಬ್ಲಿಕ್ ಶಾಲೆ ಉನ್ನತ ಆಲೋಚನೆಯಾಗಿದೆ ಎಂದರು. ಸಮನ್ವಯ ಅಧಿಕಾರಿ ರಾಧಮ್ಮ, ಮುಖ್ಯ ಶಿಕ್ಷ ಕೆ.ಎನ್ ಸುರೇಶ್, ಪುಸ್ತಕಗಳ ದಾನಿ ರಾಮಕೃಷ್ಣಪ್ಪ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಬಿ.ಪಿ.ಸತೀಶ್, ಬಿಆರ್‌ಪಿ ನಿರ್ಮಲಾ, ರಾಘವೇಂದ್ರ, ಸಿಆರ್‌ಪಿ ತ್ಯಾಗರಾಜು, ಏಜಾಜ್, ರಂಜಿತ್, ಸಹ ಶಿಕ್ಷಕಿ ಸುನಿತಾ, ಮಂಜುಳಾ, ತಾರಾ, ಯುವ ಮುಖಂಡ ಸುನಿಲ್, ಗ್ರಾಮದ ಮುಖಂಡರು, ಪೋಷಕರು ಉಪಸ್ಥಿತರಿದ್ದರು.