ದೇರಳಕಟ್ಟೆ: ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯಾಗಿದ್ದು, ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೂ ಎಲ್ಲ ಬಾಷೆಯಲ್ಲಿ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ ಸರಕಾರದ ಮಹತ್ವದ ತೀರ್ಮಾನಗಳಲ್ಲಿ ಒಂದಾಗಿದೆ. ಶಾಲೆಗೆ ಸೇರಿರುವ ಎಲ್ಲ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆ ಇಲ್ಲಿ ಎಸ್‌ಡಿಎಂಸಿ ವತಿಯಿಂದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಆಂಗ್ಲ ಶಿಕ್ಷಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಡ ಜನರೂ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮೀಡಿಯಂ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಬಂಗಾರ ಅಡವಿಟ್ಟು, ಸಾಲ ಮಾಡಿಯಾದರೂ ಶಾಲೆಗೆ ಸೇರಿಸುತ್ತಾರೆ. ಸರಕಾರದ ಈ ನಿರ್ಧಾರದಿಂದ ಉಚಿತವಾಗಿ ಶಿಕ್ಷಣಕ್ಕೆ ಅವಕಾಶ ಸಿಕ್ಕಿದೆ.
ಸರಕಾರ ಪ್ರತಿ ಶಾಲೆಯಲ್ಲಿ ಒಬ್ಬ ಶಿಕ್ಷಕಿಗೆ ತರಬೇತಿ ನೀಡಿ 30 ವಿದ್ಯಾರ್ಥಿಗಳಿಗೆ ಸೀಮಿತ ಮಾಡಿತ್ತು. ಆದರೆ ಕೆಲವೊಂದು ಶಾಲೆಗಳಲ್ಲಿ ಮಿತಿಗಿಂತಲೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಸೇರ್ಪಡೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯು.ಎ. ಖಾದರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಗ್ರಾಮ ಪಂಚಾಯತ್ ಸದಸ್ಯರಾದ ಉಸ್ಮಾನ್ ಅಕ್ಸಾ, ಕಬೀರ್ ಡಿ., ಸತೀಶ್, ನಿವೃತ್ತ ತಹಶೀಲ್ದಾರ್ ನಾರಾಯಣ ಶೆಟ್ಟಿ, ಮುಖ್ಯ ಶಿಕ್ಷಕಿ ಮೇಬಲ್ ಡಿ’ಸೋಜಾ, ಸಹ ಶಿಕ್ಷಕಿಯ ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.
ಮೂಲ ಸೌಕರ್ಯಕ್ಕೆ 15 ಲಕ್ಷ ರೂ.
ದೇರಳಕಟ್ಟೆ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಈ ಬಾರಿ ಪ್ರವೇಶಾತಿ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಆಂಗ್ಲ ಶಿಕ್ಷಣ ನೀಡುವ ವಿಚಾರದಲ್ಲಿ ಶಿಕ್ಷಣ ಇಲಾಖೆ ಮತ್ತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ. ಇಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ 15 ಲಕ್ಷ ರೂ. ಶಾಸಕರ ನಿಧಿಯಿಂದ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.