ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ವಿರೋಧ ಇಲ್ಲ. ಆದರೆ ನೆಪ ಮಾತ್ರಕ್ಕೆ ಆಂಗ್ಲ ಮಾಧ್ಯಮಗಳ ಶಾಲೆಗಳನ್ನು ತೆರೆಯದೇ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪರಿಣಿತ ಆಂಗ್ಲ ಮಾಧ್ಯಮ ಶಿಕ್ಷಕರನ್ನು ಶಾಲೆಗಳಿಗೆ ಕಾಯಂ ಆಗಿ ನೇಮಕ ಮಾಡಬೇಕಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ತಾಲೂಕಿನ ಮಂಡಿಕಲ್ ಗ್ರಾಮದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆರಂಭಿಸಿದ ಕರ್ನಾಟಕ ಪಬ್ಲಿಕ್ ಶಾಲೆಯ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ಶಾಲೆಗಳಿಗೆ ಆಂಗ್ಲ ಶಿಕ್ಷಕರನ್ನೇ ನೇಮಿಸದೇ ಶಾಲೆಯಲ್ಲಿರುವ ಕನ್ನಡ ಬೋಧನೆ ಮಾಡುವ ಶಿಕ್ಷಕರಿಗೆ ಆಂಗ್ಲ ಭಾಷೆ ತರಬೇತಿ ಕೊಟ್ಟರೆ ಸರ್ಕಾರ ಉದ್ದೇಶ ಈಡೇರುವುದಿಲ್ಲ ಎಂದರು.
ಆಂಗ್ಲ ಶಿಕ್ಷಕರನ್ನು ನೇಮಿಸಲಿ: ಸರ್ಕಾರ ಏನೇ ಕಾರ್ಯಕ್ರಮ ರೂಪಿಸಿದರೂ ಪ್ರಚಾರಕ್ಕೆ ಅಥವಾ ಹೇಳಿಕೆಗೋಸ್ಕರ ಆಗಬಾರದು. ನಿರ್ದಿಷ್ಟವಾದ ಕಾರ್ಯಕ್ರಮ ದೂರದೃಷ್ಟಿ ಚಿಂತನೆಯಿಂದ ಕೂಡಿರಬೇಕೆಂದರು. ಬಡವರ, ರೈತರ ಮಕ್ಕಳಿಗೆ ಅದರ ಲಾಭ ಆಗಬೇಕು. ಸರ್ಕಾರ ಶಾಲೆಗಳಲ್ಲಿರುವ ಶಿಕ್ಷಕರಿಗೆ ತರಬೇತಿ ಕೊಟ್ಟು ಆಂಗ್ಲ ಶಾಲೆಗಳನ್ನು ತೆರೆಯುವುದಕ್ಕಿಂತ ಪಠ್ಯ ಬೋಧನೆ ಮಾಡುವ ಆಂಗ್ಲ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಸರ್ಕಾರದ ಉದ್ದೇಶ, ನಿರೀಕ್ಷೆ ಈಡೇರುತ್ತದೆ ಎಂದರು.
ಇತರೆ ಭಾಷೆ ಕಲಿಕೆ ಮುಖ್ಯ: ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಕನ್ನಡಪರ ಹೋರಾಟಗಾರರು, ಲೇಖಕರು, ಚಿಂತಕರ ಸಾಕಷ್ಟು ವಿರೋಧ ಇದೆ. ಆದರೆ ಭಾಷೆ ವಿಚಾರ ಬಂದಾಗ ನಾವು ಸ್ಪಲ್ಪ ಮಾತೃಭಾಷೆಗೆ ಆದ್ಯತೆ ಕೊಡಬೇಕಿದೆ. ಮಾತೃಭಾಷೆಗಿಂತ ಮಿಗಿಲಾದ ಭಾಷೆ ಮತ್ತೂಂದಿಲ್ಲ. ಹಾಗಾಂತ ನಾವು 21ನೇ ಶತಮಾನದಲ್ಲಿದ್ದೇವೆ. ಇಂದಿನ ಸ್ಪರ್ಧಾ ಯುಗದಲ್ಲಿ ಇತರೇ ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ.
ನೂತನ ಕೊಠಡಿಗಳ ಉದ್ಘಾಟನೆ: ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 32.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಎರಡು ನೂತನ ಕೊಠಡಿಗಳನ್ನು ಶಾಸಕ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪಿ.ಎನ್.ಕೇಶವರೆಡ್ಡಿ, ತಾಪಂ ಅಧ್ಯಕ್ಷ ರಾಮಸ್ವಾಮಿ, ತಾಪಂ ಸದಸ್ಯರಾದ ತಿರುಮಳಪ್ಪ, ನಾರಾಯಣಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಪೆರೇಸಂದ್ರ ಗ್ರಾಪಂ ಅಧ್ಯಕ್ಷ ಚನ್ನಕೃಷ್ಣಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ಗ್ರಾಪಂ ಸದಸ್ಯರಾದ ರಾಮುಸ್ವಾಮಿ, ಫಯಾಜ್, ಮುಖಂಡರಾದ ಎಲ್‍ಐಸಿ ಮೂರ್ತಿ, ಶಂಕರ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಇದ್ದರು.
ಬೆತ್ತಲೆ ಪ್ರಕರಣ – ತಲೆತಗ್ಗಿಸುವ ವಿಚಾರ: ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ದೇಗುಲ ಪ್ರವೇಶಿಸಿದ ಎಂಬ ಕಾರಣಕ್ಕೆ ಬೆತ್ತಲೆ ಮಾಡಿ ಮೆರವಣಿಗೆ ನಡೆಸಿರುವುದನ್ನು ಖಂಡಿಸಿದ ಶಾಸಕರು, ಈ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದರು. ಪ್ರತಿಯೊಬ್ಬರು ವಿಶ್ವ ಮಾನವರಾಗಬೇಕು, ಪ್ರೀತಿ ಧರ್ಮ ಆಗಬೇಕು. ಭಾವೈಕ್ಯತೆ ಜಾತಿ ಆಗಬೇಕು. ಪ್ರೀತಿ, ವಾತ್ಸಲ್ಯ ಹಾಗೂ ಭಾವೈಕ್ಯತೆಯಿಂದ ಸಮಾಜವನ್ನು ಕಟ್ಟಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿ ಬಸ್ ಪಾಸ್ ದರ ಹೆಚ್ಚಳ ಪ್ರಸ್ತಾಪಕ್ಕೆ ಕಿಡಿ: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಬಿಸಿಯೂಟದಿಂದ ಹಿಡಿದು ಸಮವಸ್ತ್ರ, ನೋಟ್ ಬುಕ್, ಕ್ಷೀರಭಾಗ್ಯ ಮತ್ತಿತರ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಬಸ್‌ಪಾಸ್ ದರ ಹೆಚ್ಚಳ ಮಾಡುವುದು ಎಷ್ಟು ಸರಿ ಎಂದು ಶಾಸಕ ಡಾ.ಕೆ.ಸುಧಾಕರ್ ಪ್ರಶ್ನಿಸಿದರು. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ನ್ನು ಸಂಪೂರ್ಣವಾಗಿ ಉಚಿತವಾಗಿ ವಿತರಿಸುತ್ತಿತ್ತು. ಅದೇ ರೀತಿ ಮೈತ್ರಿ ಸರ್ಕಾರ ಕೂಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನಕೂಲವಾಗುವಂತೆ ಬಸ್‌ಪಾಸ್‌ನ್ನು ಉಚಿತವಾಗಿ ನೀಡಬೇಕೆಂದರು.