ಬಂಕಾಪುರ: ಉತ್ತಮ ಶಾಲೆ ಎಂದು ಹೆಸರಾಗಿದ್ದ ನಾರಾಯಣಪುರ ಗ್ರಾಮದ ಸರ್ಕಾರಿ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಆಯ್ಕೆಯಾಗುವ ಮೂಲಕ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.
ಪಾಲಕರು ತಮ್ಮ ಮಕ್ಕಳಿಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಉದ್ದೇಶದಿಂದ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದು ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಗಣನೀಯ ಇಳಿಮುಖವಾಗುತ್ತಿರುವುದನ್ನು ಗಮನಿಸಿದ ಸರ್ಕಾರ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿಯೂ ಕೂಡಾ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಿದೆ.
ಬಡವರಿಗೆ ವರದಾನ: ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಮನಸಿದ್ದರೂ ಹಣಕಾಸು, ಹೆಚ್ಚಿನ ಫೀ ಭರಿಸಲು ಹಿಂದೇಟು ಹಾಕುವ ಪಾಲಕರಿಗೆ ಇದು ವರದಾನವಾಗಿದೆ. ಈಗ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಶುಲ್ಕವಿಲ್ಲದೆ ಆಂಗ್ಲ ಮಾಧ್ಯಮ ಶಿಕ್ಷಣ ಕಲಿಯುವ ಅವಕಾಶ ಸರ್ಕಾರ ಮಾಡಿಕೊಟ್ಟಿದೆ.
ಕನ್ನಡಪರ ಸಂಘಟನೆಗಳ ವಿರೋಧ: ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಸರ್ಕಾರ ರಾಜ್ಯದಲ್ಲಿ ಪ್ರಥಮ ಹಂತವಾಗಿ 1 ಸಾವಿರ ಶಾಲೆಗಳನ್ನು ತೆರೆಯಲು ದೃಢ ನಿರ್ಧಾರ ಕೈಗೊಂಡಿದೆ. ಬರುವ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಾದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
Advertisement
ಹಾವೇರಿ ಜಿಲ್ಲೆಯ ಒಟ್ಟು 24 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದರಲ್ಲಿ ಶಿಗ್ಗಾವಿ ತಾಲೂಕಿನ ಎರಡು ಶಾಲೆಗಳಿಗೆ ಅನುಮತಿ ದೊರೆತಿದೆ. ನಾರಾಯಣಪುರದ ಕೆಪಿಎಸ್ ಶಾಲೆ ಮತ್ತು ಶಿಗ್ಗಾವಿಯ ಎಂಕೆಬಿಎಸ್ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರವೇಶಗಳು ಪ್ರಾರಂಭವಾಗಲಿವೆ.
Related Articles
Advertisement