Advertisement

ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಲಭ್ಯ

03:37 PM May 12, 2019 | Team Udayavani |

ಕುದೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಲಭ್ಯವಿದೆ. ಪೋಷಕರು ಇನ್ಮುಂದೆ ಸರ್ಕಾರಿ ಶಾಲೆಯಲ್ಲಿ ಇಚ್ಛಿಸುವ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌. ಸಿದ್ದೇಶ್ವರ ತಿಳಿಸಿದರು.

Advertisement

ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದ ರಂಗಣ್ಣ ರಂಗಮಂದಿರದಲ್ಲಿ ನಡೆದ ಹೋಬಳಿ ಮಟ್ಟದ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಶಾಲೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಮುಖ್ಯ ಶಿಕ್ಷಕರು ಶಾಲೆಗೆ ಭದ್ರ ಬುನಾದಿ ಇದ್ದಂತೆ. ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿರಬೇಕು. ಸಹಶಿಕ್ಷಕರ ಪಾಠವನ್ನು ಅವಲೋಕಿಸುವ ಮೂಲಕ ತಾವು ಕೂಡ ಒಂದೆರಡು ವಿಷಯಗಳನ್ನು ಬೋಧನೆ ಮಾಡಿ, ಮಕ್ಕಳು ಹಾಗೂ ಸಹೋದ್ಯೋಗಿ ಶಿಕ್ಷಕರ ಪ್ರೀತಿಗೆ ಪಾತ್ರಾಗಬೇಕು ಎಂದು ತಿಳಿಸಿದರು.

ಸಮಯಕ್ಕೆ ಸರಿ ಶಾಲೆಗೆ ಬನ್ನಿ: ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸಿ, ಚಟುವಟಿಕೆ ಆಧಾರಿತ ಬೋಧನೆಯಲ್ಲಿ ತೊಡಗಬೇಕು. ಶಾಲಾ ಪರಿಸರ ಹಾಗೂ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಕಾರ್ಯ ಮುಖ್ಯ ಶಿಕ್ಷಕರಿಂದ ಆಗಬೇಕು. ಶಿಕ್ಷಕರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲೇ ಸಂಬಳ ಸಿಗುವಂತೆ ಮಾಡುವುದು ನಮ್ಮ ಜವಾಬ್ದಾರಿ. ಅದಕ್ಕೆ ನಾವು ಬದ್ಧ್ದರಾಗಿದ್ದೇವೆ. ನಿಮ್ಮ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಿ, ನಿಮ್ಮಿಂದ ಕೆಲಸ ನಿರೀಕ್ಷಿಸುತ್ತೇವೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ರೂಪೇಶ್‌ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ವಿದ್ಯೆ ನೀಡುವ ಹುದ್ದೆಯಲ್ಲಿರುವ ನಾವೇ ಧನ್ಯರು. ನಮ್ಮ ಕಾರ್ಯವನ್ನು ಕಾಯಾ, ವಾಚಾ, ಮನಸಾ ಮಾಡೋಣ ಎಂದು ಹೇಳಿದರು. ಜತೆಗೆ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಗಂಗಾಧರಯ್ಯ ಮಾತನಾಡಿ, ಶುಚಿ ಹಾಗೂ ರುಚಿಯಾದ ಬಿಸಿಯೂಟ ಉಣಬಡಿಸಿ. ದೈನಂದಿನ ಬಿಸಿಯೂಟ ಫಲಾನುಭವಿಗಳ ಸಂಖ್ಯೆಯನ್ನು ಸಂದೇಶ ಮುಖಾಂತರ ಚಾಚು ತಪ್ಪದೇ ಕಳುಹಿಸಬೇಕು ಎಂದು ತಿಳಿಸಿದರು.

Advertisement

ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರಯ್ಯ, ಬಿಆರ್‌ಪಿಗಳಾದ ರವಿಕುಮಾರ್‌, ಮಂಜಪ್ಪ, ಅಶೋಕ್‌, ಉಮಾದೇವಿ, ಸಿಆರ್‌ಪಿಗಳಾದ ಸಿದ್ದರಾಜು, ಪಾಂಡುರಂಗ ಸ್ವಾಮಿ, ನಾಗರಾಜು, ರಮೇಶ್‌ ಹಾಗೂ ಐಆರ್‌ಟಿ ವಿಜಯ್‌ ಹಾಗೂ ಕುದೂರು ಹೋಬಳಿ ಮುಖ್ಯಶಿಕ್ಷಕರು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next