Advertisement

ಬೆಳ್ತಂಗಡಿ ಮಾದರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ

10:31 PM Jun 03, 2019 | Team Udayavani |

ಬೆಳ್ತಂಗಡಿ: ತಾಲೂಕಿನ ಶತಮಾನ ಕಂಡ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಗೊಂಡಿದೆ. 125 ಸಂವತ್ಸರದ ಅಂಚಿನಲ್ಲಿರುವ ಮಾದರಿ ಶಾಲೆ ತಾಲೂಕಿನ ಅತ್ಯಂತ ಹಿರಿಯ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲೂಕಿನ ಹಲವು ಗಣ್ಯರು ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಶಾಸಕ, ಸಚಿವರಾಗಿ, ಸಾಹಿತ್ಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ್ದಾರೆ.

Advertisement

1ರಿಂದ 8ನೇ ತರಗತಿ ವರೆಗೆ ಶಿಕ್ಷಣ ನೀಡ ಲಾಗುತ್ತಿದ್ದು, 2018-19ರಲ್ಲಿ 115 ಮಂದಿ ಮಕ್ಕಳ ಸಂಖ್ಯೆ ಹೊಂದಿತ್ತು. ಈ ವರ್ಷದಿಂದ ಸರಕಾರದ ಆದೇಶ ದಂತೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ ಗೊಂಡಿದೆ. ಸದ್ಯ ಈ ವರ್ಷ 1ರಿಂದ 8ರ ವರೆಗೆ 104 ಮಕ್ಕಳನ್ನು ಹೊಂದಿದ್ದು, ಈಗಾಗಲೇ ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ 7 ಮಕ್ಕಳು, ಕನ್ನಡ ಮಾಧ್ಯಮಕ್ಕೆ 3 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಜೂ. 15ರೊಳಗೆ 10ರಿಂದ 15 ಮಂದಿ ಮಕ್ಕಳು ಬರುವ ಭರವಸೆಯಲ್ಲಿ ಶಿಕ್ಷಕರಿದ್ದಾರೆ.

ಎಲ್‌ಕೆಜಿ-ಯುಕೆಜಿ
ಈ ವರ್ಷದಿಂದ ಎಸ್‌ಡಿಎಂಸಿ, ಪೋಷಕರು, ಶಾಸಕರ ಸಹಕಾರದೊಂದಿಗೆ ಎಲ್‌ಕೆಜಿ, ಯುಕೆಜಿ ಆರಂಭಿಸುವಲ್ಲಿ ಎಲ್ಲ ಸಿದ್ಧತೆಗಳು ನಡೆದಿವೆ. ಈಗಾಗಲೇ ಎರಡು ಕೊಠಡಿಗಳನ್ನು ಕಾದಿರಿಸಲಾಗಿದೆ. ಓರ್ವ ಶಿಕ್ಷಕಿ ಹಾಗೂ ಆಯಾ ನೇಮಕಗೊಳಿಸಲು ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆೆ. ಎಲ್‌ಕೆಜಿ ಯುಕೆಜಿಗೆ 25 ಮಕ್ಕಳು ದಾಖಲಾಗುವ ಬಗ್ಗೆ ಪ್ರಸ್ತಾವ ಇದೆ. ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಕಳೆದ ಬಾರಿ ಇಬ್ಬರು ಮಕ್ಕಳು ಆಯ್ಕೆಗೊಂಡಿದ್ದರು. ರಸಪ್ರಶ್ನೆಯಲ್ಲೂ ಜಿಲ್ಲಾಮಟ್ಟದ ಸಾಧನೆ ತೋರಿದ್ದಾರೆ.ಇಲ್ಲಿನ ಗುಣಮಟ್ಟದ ಶಿಕ್ಷಣ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಶಿಕ್ಷಕರ ಪ್ರೋತ್ಸಾಹ ಗಮನಾರ್ಹವಾಗಿದೆ.

ಲೈಫ್‌ ಲ್ಯಾಬ್‌
ಶಾಲೆಯಲ್ಲಿ 3ಲಕ್ಷ ರೂ. ವ್ಯಯಿಸಿ ಲೈಫ್‌ ಲ್ಯಾಬ್‌ ನಿರ್ಮಿಸುವ ಮೂಲಕ ಸೆಲ್ಕೋ ಫೌಂಡೇಶನ್‌ ಮಕ್ಕಳಿಗೆ ಮೂಲ ಶಿಕ್ಷಣ ದೊರೆಕಿಸಿಕೊಡುವಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ತಾಲೂಕಿನಲ್ಲೇ ಪ್ರಾಥಮಿಕ ಶಾಲೆಯಲ್ಲಿರುವ ಅತ್ಯುತ್ತಮ ಲ್ಯಾಬ್‌ ಇದಾಗಿದೆ. ಪಠ್ಯಕ್ಕೆ ಸಂಬಂಧಿಸಿದ ಎಲ್ಲ ಮಾದರಿಯ ವಸ್ತುಗಳು ಇಲ್ಲಿವೆ. ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಪುಸ್ತಕ ಓದಲು ಅನುಕೂಲವಾಗುವಂತೆ ಲೈಬ್ರೆರೆ ತೆರೆಯಲಾಗಿದೆ. ಎನ್‌ಜಿಒದಿಂದ 10 ಸಾವಿರ ರೂ. ಹಾಗೂ ಹಳೇ ವಿದ್ಯಾರ್ಥಿಗಳ ಸಹಾಯದಿಂದ 4 ಸಾವಿರ ರೂ. ಮೊತ್ತದಲ್ಲಿ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ. ಗ್ರಂಥಾಲಯದಲ್ಲೂ ವರ್ಣರಂಜಿತ ಗೋಡೆ ಚಿತ್ತಾರ ಆಕರ್ಷಕವಾಗಿದೆ.

ಯುನಿಸೆಫ್‌ ಮಾದರಿ
ಯುನಿಸೆಫ್‌ ಮಾರ್ಗದರ್ಶಿ ಕಲಿಕಾ ಮಾದರಿಗಳನ್ನು ಮುಂದಿಟ್ಟು ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ವಾಸ್ತವಿಕವಾಗಿ ಪ್ರಾಯೋಗಿಕ ಶಿಕ್ಷಣ ಅನುಭವ ನೀಡುವುದರಿಂದ ವೈಜ್ಞಾನಿಕ ಅನ್ವೇಷಣೆ, ಮಾನವನ ದೇಹ ರಚನೆ ಇತ್ಯಾದಿ ಪ್ರಕಾರಗಳ ಕುರಿತು ಬಹುಬೇಗನೆ ತಿಳಿವಳಿಕೆ ಹೊಂದಲು ಸಹಕಾರಿಯಾಗಿದೆ.

Advertisement

ಶಿಕ್ಷಕರ ಆವಶ್ಯಕತೆ
ಈಗಾಗಲೇ ಮುಖ್ಯೋಪಾಧ್ಯಾಯರು ಸಹಿತ 6 ಶಿಕ್ಷಕರನ್ನು ಹೊಂದಿರುವ ಶಾಲೆಯಲ್ಲಿ ಹಿಂದಿ ಹಾಗೂ ಆಂಗ್ಲ ಮಾಧ್ಯಮಕ್ಕೆ ಒಬ್ಬರು ಶಿಕ್ಷಕರ ಆವಶ್ಯಕತೆ ಇದೆ. ಜೂ. 15ರೊಳಗೆ ಎಲ್‌ಕೆಜಿ ಯುಕೆಜಿ ಆರಂಭಿಸುವಲ್ಲಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.
– ಸುರೇಶ್‌ ಎಂ. ಮುಖ್ಯೋಪಾಧ್ಯಾಯರು

Advertisement

Udayavani is now on Telegram. Click here to join our channel and stay updated with the latest news.

Next