Advertisement

ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು

02:10 PM Jul 08, 2019 | Suhan S |

ನವಲಗುಂದ: ಶಿಕ್ಷಣದ ವ್ಯಾಪಾರೀಕರಣ ಮತ್ತು ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು ಬಂದಿದೆ. ಆದರೆ, ವಿದ್ಯಾಪಾಲುದಾರರು ಮತ್ತು ಪಾಲಕರು ಜಾಗೃತರಾದರೆ ಮಾತ್ರ ಕನ್ನಡ ಭಾಷೆ, ಪ್ರದೇಶ ಉಳಿಯಲಿದೆ ಎಂದು 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದೇಶ್ವರ ಹಿರೇಮಠ ಅಭಿಪ್ರಾಯಪಟ್ಟರು.

Advertisement

ಶಿರಕೋಳ ಗ್ರಾಮದಲ್ಲಿ ರವಿವಾರ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕನ್ನಡ ನಾಡಿನ ಜನ ಶಾಂತಿ ಪ್ರೀಯರು. ಶಿರಸಂಗಿ ಲಿಂಗರಾಜರ ತಪೋಭೂಮಿಯ ಜನ ಶಾಂತಿ, ಪ್ರೀತಿಗೂ ಸಿದ್ದರು. ಕ್ರಾಂತಿಗೂ ಬದ್ದರು. ಕೃಷಿ ಕ್ಷೇತ್ರದ ಮೇಧಾವಿಗಳು, ಶಿಕ್ಷಣ ಕ್ಷೇತ್ರದ ಧೀಮಂತರು ಈ ನಾಡಲ್ಲಿದ್ದಾರೆ.

ಬರಗಾಲ ಪ್ರದೇಶ ಇದಾಗಿದ್ದರೂ ದಿಟ್ಟತನದಿಂದ ಅವಿರತ ಪರಿಶ್ರಮ ಪಡುತ್ತಿರುವ ಗ್ರಾಮೀಣ ಭಾಗದ ರೈತರ ಬದುಕು ಸಂಕಷ್ಟದಿಂದ ಸಾಗಿದೆ. ತಾಲೂಕಿನಲ್ಲಿ ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಕಾಳಜಿಯುಳ್ಳವರಿದ್ದಾರೆ. ಅನೇಕ ಧಾರ್ಮಿಕ ದೇವಸ್ಥಾನಗಳ ಕ್ಷೇತ್ರಗಳು ಭಾವೈಕ್ಯತೆಗೆ ಸಾಕ್ಷಿಯಾಗಿವೆ. ಬೆಣ್ಣಿಹಳ್ಳ, ತುಪ್ಪರಿ ಹಳ್ಳ, ಹೂಲಿ ಹಳ್ಳ ಸಂಗಮದಲ್ಲಿ ಜಾತ್ರೆ ನಡೆಯುತ್ತವೆ. ಇವುಗಳನ್ನೇಲ್ಲ ನೋಡಿದರೆ ಕನ್ನಡ ನಾಡಿನ ಸೊಬಗು ಕಣ್ಣತುಂಬಿಕೊಳ್ಳಬಹುದು ಎಂದರು.

ಹಿರಿಯ ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಗ್ರಾಮೀಣ ಮಟ್ಟದಲ್ಲಿ ಸಾಹಿತ್ಯದ ರಸದೌತನವನ್ನು ಜಿಲ್ಲಾಧ್ಯಕ್ಷರು ಉಣಬಡಿಸಿದ್ದಾರೆ. ನಗರಗಳಿಕ್ಕಿಂತ ಸ್ವಚ್ಛ ಕನ್ನಡ ಗ್ರಾಮೀಣದಲ್ಲಿ ಸಿಗುತ್ತದೆ. ಇಂತಹ ಮಳೆಯಲ್ಲಿಯೂ ಸಾಹಿತ್ಯ ಅಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ಸಾಹಿತಿಗಳು, ಕವನ ಸಂಕಲನಗಾರರು, ಕವಿಗಳು ಎಲೆಮರಿ ಕಾಯಿಗಳಂತೆ ಜನಿಸಲೆಂದು ಆಶಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪವಾಡಶೆಟ್ಟರ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ನಗರಕ್ಕೆ ಮಾತ್ರ ಸೀಮಿತವಾಗಬಾರದು. ಗ್ರಾಮೀಣದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ಸಾಹಿತ್ಯದ ಅಭಿರುಚಿ ಬೆಳೆಸುವ ಕೆಲಸಗಳು ನಡೆಯಬೇಕು. ಪ್ರತಿವರ್ಷ ಕನ್ನಡ ಕಂಪನ್ನು ತಾಲೂಕಿನಲ್ಲಿ ಪಸರಿಸುತ್ತೇವೆ. ಗ್ರಾಮೀಣದಲ್ಲಿ ಕನ್ನಡದ ದೀಪವನ್ನು ಬೆಳಗಿಸುವ ಕಾರ್ಯ ಆಗಬೇಕೆಂದು ಹೇಳಿದರು.

Advertisement

ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಮಾತನಾಡಿದರು. ಶಿರಕೋಳ ಹಿರೇಮಠದ ಗುರುಶಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿ, 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆರಾಯ ಆಶೀರ್ವಾದ ಮಾಡಿದಂತಾಗಿದೆ. ಗ್ರಾಮೀಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದಂತಾಗಿದೆ. ಇದೇ ರೀತಿ ಗ್ರಾಮೀಣದಲ್ಲಿ ಸಾಹಿತಿಗಳ ಸಮ್ಮೇಳನ ಹೆಚ್ಚು ಜರುಗಬೇಕು ಎಂದು ಹೇಳಿದರು.

ಇದೇ ವೇಳೆ ಸಮ್ಮೇಳನದ ನಿಕಟ ಪೂರ್ವಾಧ್ಯಕ್ಷ ಅಡಿವೆಪ್ಪ ಕಮತರ, ವಿವಿಧ ಸಾಹಿತಿ ಮತ್ತು ಗಣ್ಯರನ್ನು ಗೌರವಿಸಲಾಯಿತು. ಸಿದ್ದೇಶ್ವರ ಹಿರೇಮಠ ಅವರ ‘ರಕ್ಷಕ’ ಕೃತಿ, ಮಹಾಂತೇಶ ಅಣ್ಣಿಗೇರಿ ಅವರ ‘ಶ್ರೀಗುರು ಸಿದ್ದೇಶ್ವರ ಚರಿತ್ರೆ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕರು, ಮಾಜಿ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಅನುಪಸ್ಥಿತಿ ಎದ್ದು ಕಂಡಿತು.

ಸ್ಥಳೀಯ ಶಾಸಕರ ಸಹೋದರ ಡಾ| ಎಂ.ಬಿ. ಮುನೇನಕೊಪ್ಪ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಧ್ಯಕ್ಷ ಕೆ.ಎಸ್‌.ಪಾಟೀಲ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ| ಕೆ.ಎಸ್‌. ಕೌಜಲಗಿ, ಪ್ರಕಾಶ ಅಂಗಡಿ, ಬಿ.ಎಸ್‌. ಸೊಪ್ಪಿನ, ಪರಪ್ಪ ಗಾಣಿಗೇರ, ಸಿ.ಕೆ. ನರೇಂದ್ರ, ಶರಣಬಸಪ್ಪ ಹೂಲಿ, ಈರಣ್ಣ ಚವಡಿ, ಉಮೇಶ ಗಬ್ಬೂರ, ಮಲ್ಲಮ್ಮ ಉಗರಗೋಳ, ಶಿವು ವಿಭೋತಿ, ಅಣ್ಣಪ್ಪ ಬಾಗಿ, ದೇವರಾಜ ಕರಿಯಪ್ಪನವರ, ಈರಣ್ಣ ಚವಡಿ, ಕೆ.ಸಿ. ಹೊಸಕೋಟಿ, ಎಸ್‌.ಎಂ. ಮೆಣಸಿನಕಾಯಿ, ಶಿವಯೋಗಿ ಜಂಗಣ್ಣವರ, ಲಿಂಗರಾಜ ಕಮತ, ಪ್ರಶಾಂತ ರಡ್ಡೇರ, ಮಲ್ಲಿಕಾರ್ಜುನ ಪಾಟೀಲ, ಮಲ್ಲಿಕಾರ್ಜುನ ವಗ್ಗರ, ಎಚ್.ಎಫ್‌. ಸುತಾರ ಇದ್ದರು. ಎನ್‌.ಸಿ. ತಳವಾಯಿ ಸ್ವಾಗತಿಸಿದರು. ಮಹಾಂತೇಶ ಅಣ್ಣಿಗೇರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next