ಬಂಟ್ವಾಳ: ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡಿರುವ ಕನ್ಯಾನ ಹಿ.ಪ್ರಾ. ಶಾಲೆಯಲ್ಲಿ ಈ ವರ್ಷದಿಂದ ಸರಕಾರದ ಅನುಮತಿಯೊಂದಿಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡಿದ್ದು, ಜತೆಗೆ ವಿದ್ಯಾರ್ಥಿ ಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್‌ಕೆಜಿಯನ್ನೂ ಆರಂಭಗಳಿಸಲಾಗಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ 324 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, 22 ವಿದ್ಯಾರ್ಥಿಗಳು ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದರು. ಈ ಬಾರಿ ಒಂದನೇ ತರಗತಿಗೆ ಈಗಾಗಲೇ 25 ವಿದ್ಯಾರ್ಥಿಗಳು ದಾಖಲಾಗಿದ್ದು, ಎಲ್‌ಕೆಜಿಗೆ 19 ಮಂದಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.
ಆಂಗ್ಲ ಶಿಕ್ಷಣದ ಆರಂಭದ ದೃಷ್ಟಿಯಿಂದ ಶಾಲೆಯ ಇಬ್ಬರು ಶಿಕ್ಷಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಒಂದರಿಂದ 8ನೇ ತರಗತಿವರೆಗೆ 10 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದೆ ಎಲ್‌ಕೆಜಿಯಲ್ಲಿ ಬೋಧನೆಗೆ ಶಿಕ್ಷಕರ ಅಗತ್ಯತೆ ಬೀಳುವ ಸಾಧ್ಯತೆ ಇದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿ ಗಳು ಉತ್ತಮ ಪ್ರಗತಿ ತೋರುತ್ತಿದ್ದಾರೆ.
ಶಾಲೆಯ ಸೌಕರ್ಯದ ಕುರಿತು ಹಾಲಿ ವ್ಯವಸ್ಥೆಗೆ ಕಟ್ಟಡ ಹಾಗೂ ಬೆಂಚು-ಡೆಸ್ಕ್ ಲಭ್ಯವಿದ್ದು, ಮುಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ ತರಗತಿ ಕೊಠಡಿಯ ಜತೆಗೆ ಪೀಠೊಪಕರಣಗಳ ಕೊರತೆಯೂ ಕಾಡಬಹುದು. ಹೀಗಾಗಿ ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.
ಶಾಲೆಗೆ ಪ್ರಮುಖವಾಗಿ ನೀರಿನ ವ್ಯವಸ್ಥೆ ಆಗಬೇಕಿದೆ. ಕೊಳವೆಬಾವಿ ಹಾಗೂ ಗ್ರಾಮ ಪಂಚಾಯತ್‌ನ ಬಾವಿ ಇದ್ದು, ಅದನ್ನು ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿವೆ. ಇಂತಹ ಮೂಲ ಸೌಕರ್ಯಗಳು ಲಭ್ಯವಾದಲ್ಲಿ ಕನ್ಯಾನ ಶಾಲೆಯೂ ಮಾದರಿ ಶಾಲೆಯಾಗಿ ಬೆಳೆಯಲಿದೆ.
ಬಹಳ ಪ್ರಯೋಜನ
ಗ್ರಾಮೀಣ ಪ್ರದೇಶವಾದ ಕನ್ಯಾನದಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗುತ್ತಿರುವುದು ಉತ್ತಮ ವಿಚಾರ. ಇಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೇ ಹೆಚ್ಚಿದ್ದು, ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಷ್ಟು ಆರ್ಥಿಕವಾಗಿ ಶಕ್ತರಲ್ಲ. ಹೀಗಾಗಿ ಸರಕಾರದ ನಿರ್ಧಾರದಿಂದ ಬಹಳ ಪ್ರಯೋಜನವಾಗಲಿದೆ.
-ಲಿಂಗಪ್ಪ ಗೌಡ, ಹೆತ್ತವರು
ಹೆಚ್ಚಿನ ಸೌಕರ್ಯ ಅಗತ್ಯ
ಶಾಲೆಗೆ ಸರಕಾರದಿಂದ ಆಂಗ್ಲ ಮಾಧ್ಯಮ ಆರಂಭಕ್ಕೆ ಅನುಮತಿ ಲಭಿಸಿದೆ. ಪ್ರಸ್ತುತ ಮೂಲ ಸೌಕರ್ಯಗಳಿದ್ದು, ಮುಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ ಹೆಚ್ಚಿನ ಆವಶ್ಯಕತೆ ಬರಬಹುದು. ಎಲ್ಲರ ಸಹಕಾರದಿಂದ ಶಾಲೆ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ.
-ಬಾಬು ನಾಯ್ಕ ಬಿ. ಮುಖ್ಯ ಶಿಕ್ಷಕರು