Advertisement

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ತರಗತಿ –ಕನ್ನಡಕ್ಕೆ ಮಂಗಳಾರತಿ?

12:05 AM Jun 20, 2019 | mahesh |

ಸರಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲಮಾಧ್ಯಮ ವಿಭಾಗವನ್ನು ಆರಂಭಿಸಲಾಗಿದೆಯಷ್ಟೆ? ಈ ಕ್ರಮ ಕೊನೆಗೂ ರಾಜ್ಯ ಸರಕಾರ ಸಾರ್ವಜನಿಕರ ಅಭಿಪ್ರಾಯಕ್ಕೆ ಮಣಿದಿದೆ ಎನ್ನುವುದರ ದ್ಯೋತಕ ವಲ್ಲದೆ ಇನ್ನೇನಲ್ಲ. ಈ ಬಾರಿ ಆಂಗ್ಲ ಮಾಧ್ಯಮ ವಿಭಾಗವನ್ನು ಆಯ್ದ ಒಂದು ಸಾವಿರ ಶಾಲೆಗಳಲ್ಲಿ ಆರಂಭಿಸಲಾಗಿದೆ. ಪ್ರತಿ ಇಂಗ್ಲಿಷ್‌ ಮಾಧ್ಯಮ ತರಗತಿಯಲ್ಲಿ ನೋಂದಾಯಿಸಲ್ಪಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಲಾಗಿದೆ. ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್‌ ವಿಭಾಗವನ್ನು ಅಳವಡಿಸಿದರೆ ಕನ್ನಡ ಮಾಧ್ಯಮ ವಿಭಾಗವನ್ನು ಮುಚ್ಚಬೇಕಾಗಿಬರಬಹುದೆಂಬ ಭೀತಿ ಸರಕಾರದ ಈ (30ರ ಪರಿಮಿತಿಯ) ನಿರ್ಧಾರದ ಹಿಂದಿರುವಂತಿದೆ.

Advertisement

ಇಂಗ್ಲಿಷ್‌ ಮೀಡಿಯಂ ಆರಂಭಿಸುವ ಸರಕಾರದ ಕ್ರಮ ಆಂಗ್ಲ ಮಾಧ್ಯಮ ತರಗತಿಗಳೇ ಬೇಡ ಎಂಬ ಕಟ್ಟಾ ಆಗ್ರಹದೊಂದಿಗೆ ಕನ್ನಡ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ನಡೆಸುತ್ತಾ ಬಂದಿರುವ ಆಂದೋಲನಕ್ಕೆ ದೊರೆತಿರುವ ಹಿನ್ನಡೆಯೇ ಸರಿ. ಒಂದು ವೇಳೆ ಶಿಕ್ಷಣ ತಜ್ಞ ಡಾ| ಎಚ್. ನರಸಿಂಹಯ್ಯ ಅವರು ಬದುಕಿದ್ದಿದ್ದರೆ ಸರಕಾರದ ಈ ನಿರ್ಧಾರಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದರೋ ಎಂದು ಹೆಚ್ಚಿನವರು ಅಚ್ಚರಿಪಡುವಂತಾಗಿದೆ.

ಇಂದು ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ ಶಿಕ್ಷಣದ ಬಗ್ಗೆ ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಿರುವ ಕೆಲ ಕನ್ನಡ ಪರ ಹೋರಾಟಗಾರರಿಗಿಂತ ಡಾ| ಎಚ್.ಎನ್‌. ತೀರಾ ಭಿನ್ನವಾಗಿದ್ದರು. ಅವರು ಅಮೆರಿಕದಲ್ಲಿ ಓದಿ ಭೌತಶಾಸ್ತ್ರ ಪದವಿ ಸಂಪಾದಿಸಿದವರು; ಹಿಂದಿನ ಬೆಂಗಳೂರು ವಿವಿಯ ಉಪಕುಲಪತಿಗಳಾಗಿ ಅದನ್ನು ಕಟ್ಟಿ ಬೆಳೆಸಿದವರು. ದುರದೃಷ್ಟವಶಾತ್‌ ನಮ್ಮ ಇಂದಿನ ಸಾಹಿತಿಗಳ ಹಾಗೂ ಕನ್ನಡ ಹೋರಾಟಗಾರರ ಪೈಕಿ ಹೆಚ್ಚಿನವರು ಕನ್ನಡ ಮಾಧ್ಯಮವೋ ಅಥವಾ ಇಂಗ್ಲಿಷ್‌ ಮೀಡಿಯಮ್ಮೋ ಎಂಬ ಪ್ರಶ್ನೆ ಎದುರಾದಾಗ ರಕ್ಷಣಾತ್ಮಕವಾಗಿ ವ್ಯವಹರಿಸುವುದನ್ನು ನೋಡುತ್ತಿದ್ದೇವೆ. ಯಾಕೆಂದರೆ ಇವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿರುವವರು. ಇನ್ನು ಕೆಲವರಂತೂ ಖುದ್ದಾಗಿ ಇಂಥ ಆಂಗ್ಲ ಶಾಲೆಗಳನ್ನು ನಡೆಸುತ್ತಿರುವವರು. ಇವರ ಕನ್ನಡ ಪರ ನಿಲುವು ಎಷ್ಟು ಪ್ರಾಮಾಣಿಕ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ನಮ್ಮ ಮಂತ್ರಿ ಮಹೋದಯರುಗಳಲ್ಲಿ ಹೆಚ್ಚಿನವರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಕ್ರೈಸ್ತ ಸಂಘಟನೆಗಳು ನಡೆಸುತ್ತಿರುವ ತಥಾಕಥಿತ ‘ಗೌರವಾನ್ವಿತ’ ಇಂಗ್ಲಿಷ್‌ ಮೀಡಿಯಂ ಸ್ಕೂಲ್ಗಳಿಗೆ ಕಳುಹಿಸುತ್ತಿರುವುದು ಗೊತ್ತೇ ಇದೆ. ಈ ಮಾತಿಗೆ ಅಪವಾದಗಳು ಇಲ್ಲದಿಲ್ಲ. ನಮ್ಮ ಮಾಜಿ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಮಗಳನ್ನು ಕಳಿಸಿದ್ದು ಶಿರಸಿಯ ಕನ್ನಡ ಮಾಧ್ಯಮ ಶಾಲೆಗೆ. ಹಾಗೆ ನೋಡಿದರೆ ಶಿಕ್ಷಣ ತಜ್ಞರು ಹಾಗೂ ಕನ್ನಡ ಪರ ಹೋರಾಟಗಾರರು ಕೆಲ ದಶಕಗಳಿಂದ ಜನ ಮಾನಸದಲ್ಲಿ ರೂಪುಗೊಳ್ಳುತ್ತಾ ಬಂದಿರುವ ಭಾಷಾ ಮಾಧ್ಯಮ ಕುರಿತ ಭಾವನೆ ಅರ್ಥಮಾಡಿಕೊಳ್ಳುವಲ್ಲಿ ವಿಫ‌ಲರಾಗಿದ್ದಾರೆಂದೇ ಹೇಳಬೇಕಾಗಿದೆ.

ಈಗ ಕುಮಾರಸ್ವಾಮಿ ಸರಕಾರ ತೆಗೆದುಕೊಂಡಿರುವ ನಿರ್ಧಾರ ಏನೇ ಇರಲಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ಒದಗಿಸಬೇಕೆಂಬ ಶಿಕ್ಷಣರಂಗದ ತಜ್ಞರ ನಿಲುವನ್ನು ಯಾವ ಬಗೆಯಲ್ಲೂ ಅಲ್ಲಗಳೆಯುವಂತಿಲ್ಲ. ಇಂಗ್ಲಿಷ್‌ ಇರಲಿ, ಆದರೆ ಒಂದು ಭಾಷೆಯಾಗಿ ಅದನ್ನು ಕಲಿಯುವಂತಾಗಲಿ, ಕಲಿಕೆಯ ಮಾಧ್ಯಮ ವಾಗಿ ಇಂಗ್ಲಿಷ್‌ ಬೇಕಿಲ್ಲ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಕಳೆದ ಕೆಲ ವರ್ಷಗಳಲ್ಲಿ ಬಂದಿರುವ ಸರಕಾರಗಳ ಮೊಂಡು ನಿಲುವೇ ನಮ್ಮ ಶಾಲಾ ಶಿಕ್ಷಣವನ್ನು ಬಾಧಿಸುತ್ತಿರುವ ಅನೇಕ ರೋಗಗಳಿಗೆ ಕಾರಣ ಎಂಬುದೇ ಇಂದಿನ ಕಹಿ ವಾಸ್ತವ. ಪಿಡುಗುಗಳಲ್ಲೊಂದು ಕಳಪೆ ಗುಣಮಟ್ಟದ ಇಂಗ್ಲಿಷ್‌ ಶಾಲೆಗಳು ಅಣಬೆಗಳಂತೆ ತಲೆ ಎತ್ತಿರುವುದು. ಇವುಗಳಲ್ಲಿ ಹೆಚ್ಚಿನವು ತಮ್ಮನ್ನು ತಾವೇ ‘ಕಾನ್ವೆಂಟ್ ಸ್ಕೂಲ್’ಗಳೆಂದು ಕರೆದುಕೊಳ್ಳುತ್ತಿರುವ, ಇಂಗ್ಲಿಷ್‌ ಮಾಧ್ಯಮ ಕುರಿತ ಜನಕಾಂಕ್ಷೆಯನ್ನು ಅಕ್ಷರಶಃ ಶೋಷಿಸುತ್ತಿರುವ ಆಡಳಿತ ಮಂಡಳಿಗಳಿಂದ ನಡೆಸಲ್ಪಡುತ್ತಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು. ಹಿಂದೆಲ್ಲ ಕೇವಲ ಪೇಟೆ-ಪಟ್ಟಣಗಳಿಗಷ್ಟೇ ಸೀಮಿತವಾಗಿದ್ದ ಡೊನೇಶನ್‌ ಪಿಡುಗು ಇಂದು ರಾಜ್ಯಾದ್ಯಂತ ವ್ಯಾಪಿಸಿದೆ. ಆದರೆ ಇದೇ ವೇಳೆ, ಈ ಶಾಲೆಗಳಲ್ಲಿ ಕಲಿಸುತ್ತಿರುವ ಶಿಕ್ಷಕರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿಲ್ಲ. ಅವರನ್ನು ನಿಜಾರ್ಥದಲ್ಲಿ ಶೋಷಿಸಲಾಗುತ್ತಿದೆ.

Advertisement

ಶಿಕ್ಷಕರ ಮತದಾರ ಕ್ಷೇತ್ರಗಳಿಂದ ಹಾಗೂ ಪದವೀಧರ ಕ್ಷೇತ್ರಗಳಿಂದ ಆರಿಸಿ ಬರುತ್ತಿದ್ದ ವಿಧಾನ ಪರಿಷತ್‌ ಸದಸ್ಯರು, ಶಿಕ್ಷಕರ ಶೋಷಣೆಯ ಕುರಿತು ಧ್ವನಿಯೆತ್ತುತ್ತಿದ್ದ ದಿನಗಳು ಎಂದೋ ಕಳೆದು ಹೋಗಿವೆ. ಇಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳೂ ಶೋಷಕರ ಸಾಲಿಗೆ ಸೇರಿವೆ, ಶಿಕ್ಷಕರ ನೇಮಕಾತಿ ಹಾಗೂ ಭಡ್ತಿಗೂ ಡೊನೇಶನ್‌ ಕೊಡಬೇಕು ಎಂಬಂಥ ದಿನಗಳು ಬಂದಿವೆಯೆಂಬ ದೂರುಗಳು ಕೇಳಿಬಂದಿವೆ.

ಸರಕಾರವೀಗ ಯಾವ ನಿರ್ಧಾರವನ್ನು ತೆಗೆದುಕೊಂಡಿದೆಯೋ, ಅದು ನಿಜಕ್ಕೂ ವಿಳಂಬದ ನಿರ್ಧಾರವೆಂದೇ ಹೇಳಬೇಕಾಗಿದೆ. ಈ ನಿರ್ಧಾರ ಕೊಂಚ ಮೊದಲೇ ಕಾರ್ಯಗತವಾಗಿದ್ದಿದ್ದರೆ ಶಿಕ್ಷಣ ಕ್ಷೇತ್ರದಲ್ಲಿನ ಕೆಲವು ಸಮಸ್ಯೆಗಳಿಗೆ ಇಷ್ಟರಲ್ಲೇ ಪರಿಹಾರ ದೊರೆತಿರುತ್ತಿತ್ತು! ಒಂದು ರೀತಿಯಲ್ಲಿ, ಈ ವಿಷಯದಲ್ಲಿ ನಾವು ದೂರಬೇಕಿರುವುದು ಸರಕಾರವನ್ನೇ. ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟ ಹಾಗೂ ಶಾಲೆಗಳಲ್ಲಿನ ಬೋಧನಾ ಪರಿಸರವೆಂಬುದು ಕುಲಗೆಟ್ಟು ಹೋಗಲು ಅವಕಾಶ ಕಲ್ಪಿಸಿರುವುದು ಸರಕಾರವೇ. 1960ರ ದಶಕದವರೆಗೂ ಸರಕಾರಿ ಶಾಲೆಗಳು ಹಾಗೂ ಕಾಲೇಜುಗಳು ಹೆತ್ತವರ ಹಾಗೂ ಮಕ್ಕಳ ಪ್ರಥಮ ಆದ್ಯತೆಯ ಆಯ್ಕೆಗಳಾಗಿದ್ದವು. ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ಸೂಕ್ತ ಶಿಕ್ಷಕರಿಗೆ ಸೂಕ್ತ ಮೊತ್ತದ ವೇತನ ಹಾಗೂ ಭಡ್ತಿ ಅವಕಾಶವನ್ನು ವಂಚಿಸಲಾಗುತ್ತಿತ್ತಾದರೂ ಈ ಶಾಲೆ- ಕಾಲೇಜುಗಳಲ್ಲಿ ಸಮರ್ಥ ಅಧ್ಯಾಪಕ ವರ್ಗವಿತ್ತು. ಕನಿಷ್ಠ ಪಕ್ಷ ಒಂದು ಆಟದ ಮೈದಾನವೂ ಇಲ್ಲದ ಇಂದಿನ ಶಾಲೆ ಕಾಲೇಜುಗಳಂತಲ್ಲದೆ ಅಂದಿನ ಶಾಲೆ ಕಾಲೇಜುಗಳು ಪೂರ್ಣ ಪ್ರಮಾಣದ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸಂಸ್ಥೆಗಳಾಗಿದ್ದವು.

ಮಹಾರಾಜರ ಕಾಲದ ಮೈಸೂರಿನಲ್ಲಿ, ಒಂದೆಕರೆಯಷ್ಟು ತೆರೆದ ಮೈದಾನ ಹೊಂದಿಲ್ಲದಿದ್ದರೆ ಅಂಥ ಶಾಲೆಗಳಿಗೆ ಅನುಮತಿಯೇ ಸಿಗುತ್ತಿರಲಿಲ್ಲ. 1970ರ ದಶಕದಲ್ಲಿ ಅಸ್ತಿತ್ವಕ್ಕೆ ಬಂದ ಜೆ.ಬಿ. ಮಲ್ಲಾರಾಧ್ಯ ಸಮಿತಿ ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಈ ಅಂಶವನ್ನು ಒತ್ತಿ ಹೇಳಲಾಗಿತ್ತು. ಮಲ್ಲಾರಾಧ್ಯ ಅವರು ಐಎಎಸ್‌ ಅಧಿಕಾರಿಯಾಗಿ ನಿವೃತ್ತಿ ಹೊಂದಿ ರಾಜಕೀಯ ಪ್ರವೇಶಿಸಿದ್ದವರು; ಕ್ರೀಡಾ ಆಡಳಿತದ ಉಸ್ತುವಾರಿ ಹೊಂದಿದ್ದವರು; ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದವರು.

ಇಂದು ‘ನ್ಯಾಕ್‌’ ಮನ್ನಣೆ ದೊರೆತಿದೆಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಬೆಂಗಳೂರಿನ ಒಂದು ಖಾಸಗಿ ಶಾಲೆ/ಕಾಲೇಜು ಕ್ಯಾಂಪಸ್‌, ಒಂದೆಕರೆಗಿಂತಲೂ ಕಡಿಮೆ ಸ್ಥಳಾವಕಾಶ ದಲ್ಲಿ 17,000 ವಿದ್ಯಾರ್ಥಿಗಳನ್ನು ಕೂಡಿಹಾಕಿರುವ ಸೋಜಿಗದ ವಿದ್ಯಮಾನ ನಮ್ಮ ಕಣ್ಣೆದುರಲ್ಲೇ ಇದೆ. ಇಲ್ಲಿ ತರಗತಿಗಳನ್ನು ಪಾಳಿಗಳಲ್ಲಿ ನಡೆಸಲಾಗುತ್ತಿದೆ. ವಸ್ತುಸ್ಥಿತಿಯೆಂದರೆ ನಮ್ಮ ಹೆಚ್ಚಿನ ಶಾಲೆ – ಕಾಲೇಜುಗಳು ಸುಸಜ್ಜಿತ ಕ್ಯಾಂಪಸ್‌ ಹೊಂದಿಲ್ಲ; ಅವುಗಳಲ್ಲಿ ಓದುತ್ತಿರುವ ಗಂಡು – ಹೆಣ್ಣುಮಕ್ಕಳು ತಮ್ಮ ಬಿಡುವಿನ ವೇಳೆಯನ್ನು ಕಳೆಯುತ್ತಿರುವುದು ರಸ್ತೆಗಳಲ್ಲೇ. ಸರಕಾರಿ ಶಾಲೆಗಳ ಅವಸ್ಥೆ ಸರಕಾರಿ ಆಸ್ಪತ್ರೆಗಳಂತೆಯೇ ಆಗಿದೆ.

ಹಿಂದೆ ಮೈಸೂರಿನ ಲಕ್ಷ್ಮೀಪುರಂನಲ್ಲಿದ್ದ ಸರಕಾರಿ ಮಾಧ್ಯಮಿಕ ಶಾಲೆಯ ಕಟ್ಟಡವನ್ನು ಸರಕಾರ ‘ಕರ್ನಾಟಕ’ ರಾಜ್ಯ ಡಾ| ಗಂಗೂಬಾಯ್‌ ಹಾನಗಲ್ ಸಂಗೀತ ಹಾಗೂ ರಂಗಕಲಾ ವಿ.ವಿ.ಯನ್ನು ನಡೆಸಲು ಬಳಸಿಕೊಂಡಿದೆ. ಅಂದಿನ ಆ ಸರಕಾರಿ ಮಾಧ್ಯಮಿಕ ಶಾಲೆ ವಿಶಾಲವಾದ ಮೈದಾನವನ್ನು ಹೊಂದಿತ್ತು; ಸಂಗೀತಗಾರರೂ ಒಳಗೊಂಡಂತೆ ಅನೇಕ ಪ್ರತಿಭಾನ್ವಿತ ಮೈಸೂರಿ ಗರನ್ನು ಆ ಕನ್ನಡ ಶಾಲೆ ರೂಪಿಸಿದೆ.

ಇನ್ನೊಂದು ಮಾತು – ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಶಿಕ್ಷಣ ತಜ್ಞರ ಅಭಿಪ್ರಾಯ ಪೇಟೆ – ಪಟ್ಟಣಗಳು ಮಾತ್ರವಲ್ಲ, ಹಳ್ಳಿಗಳಲ್ಲಿರುವ ಅಪ್ಪ-ಅಮ್ಮಂದಿರಿಗೂ ಸರಿಯಾಗಿ ಮನದಟ್ಟಾಗಿಲ್ಲ. ಹಿಂದಿ ಭಾಷಿಕರಿರುವ ರಾಜ್ಯಗಳಿಗೂ ಈ ಮಾತು ಅನ್ವಯವಾಗುತ್ತದೆ. ಮಗುವಿನ ಕಲಿಕೆ ಮಾಧ್ಯಮ ಮಾತೃ ಭಾಷೆಯಾಗಿದ್ದಲ್ಲಿ ಅದರ ಗ್ರಹಿಕೆಯ ಮಟ್ಟ ಉತ್ತಮವಾಗಿರುತ್ತದೆ ಎಂಬ ಶಿಕ್ಷಣ ತಜ್ಞರ ವಾದಕ್ಕೆ ನಮ್ಮ ಮಕ್ಕಳ ಅಪ್ಪ ಅಮ್ಮಂದಿರು ಬೆಲೆಯನ್ನೇ ಕೊಟ್ಟಿಲ್ಲ.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ನಮ್ಮ ಶಾಸಕರಲ್ಲಿ ಹೆಚ್ಚಿನವರು, ಒಂದನೆಯ ತರಗತಿಯಿಂದಲೇ ಇಂಗ್ಲಿಷ್‌ ಕಲಿಸ ಬೇಕೆಂದು ಕಳೆದೊಂದು ದಶಕದಿಂದಲೂ ಆಗ್ರಹಿಸುತ್ತ ಬಂದಿ ದ್ದಾರೆ. ಹಿಂದೆಲ್ಲಾ ಕನ್ನಡ ಮಾಧ್ಯಮ ಪರ ಘೋಷಣೆ ಮೊಳಗಿ ಸುತ್ತಿದ್ದವರು ಇವರೆಲ್ಲ. ಜನರು ಕನ್ನಡಕ್ಕೆ ಕಿಮ್ಮತ್ತು ನೀಡದೆ ಇಂಗ್ಲಿಷ್‌ ಹುಚ್ಚು ಹಿಡಿಸಿಕೊಂಡಿದ್ದಾರೆಂದು ಶಿಕ್ಷಣ ತಜ್ಞರು ಆಕ್ಷೇಪಿಸುತ್ತಿದ್ದ ದಿನಗಳಿದ್ದವು. ಆದರೆ, ನಮ್ಮಲ್ಲಿ ‘ಇಂಗ್ಲಿಷ್‌ ಹಠಾವೋ’ದಂಥ ಆಂದೋಲನ ನಡೆದದ್ದಿಲ್ಲ. ಆದರೆ ನಮ್ಮ ಪಂಡಿತ ವರ್ಗಕ್ಕಿಂತಲೂ ನಮ್ಮ ಅಪ್ಪ ಅಮ್ಮಂದಿರಲ್ಲಿ ಹೆಚ್ಚಿನವರು ವ್ಯಾವಹಾರಿಕ ದೃಷ್ಟಿಕೋನದವರು. ಇವರಲ್ಲಿ ಕೆಲವರು ಇಂಗ್ಲಿಷ್‌ ಎಂದರೆ ಪ್ರತಿಷ್ಠಿತರ ಭಾಷೆ ಎಂದು ಭಾವಿಸುವವರಿರಬಹುದು. ಅದು ಬೇರೆ ಮಾತು. ಗ್ರಾಮಾಂತರ ಮಟ್ಟದಲ್ಲಿ ಇಂಗ್ಲಿಷ್‌ ಮಾಧ್ಯಮ ಸರಕಾರಿ ಶಾಲೆಗಳಿಲ್ಲವೆಂಬ ಕಾರಣಕ್ಕಾಗಿಯೇ ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಿಗೆ ಕಳಿಸಬೇಕಾಗಿಬಂತೆನ್ನುವುದು ಒಪ್ಪಬೇಕಾದ ಮಾತೇ ಆಗಿದೆ.

ಇಂಗ್ಲಿಷ್‌ ಮೀಡಿಯಂನಲ್ಲಿ ಓದಿದರೆ ಮುಂದೆ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶಗಳು ಲಭಿಸುತ್ತವೆನ್ನುವುದೇ ಹೆತ್ತವರು ಇಂಗ್ಲಿಷ್‌ ಶಾಲೆಗಳನ್ನು ಆಯ್ದುಕೊಳ್ಳಲು ಮುಖ್ಯ ಕಾರಣ. ಮಾತ್ರವಲ್ಲ, ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವುದಕ್ಕೂ, ಖಾಸಗಿ ಅಥವಾ ಕಾರ್ಪೊರೇಟ್ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸುವುದಕ್ಕೂ ಸುಲಭವಾಗುತ್ತದೆ. ಕಾಲೇಜುಗಳಿಂದ ಪ್ರತಿವರ್ಷ ಉತ್ತೀರ್ಣರಾಗಿ ಹೊರಬೀಳುವ ಎಲ್ಲರಿಗೂ ಕೆಲಸ ಕೊಡಲು ಸರಕಾರಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೆ ಸರಕಾರಿ ಹುದ್ದೆಯಲ್ಲಾಗಲಿ, ಶಿಕ್ಷಣದಲ್ಲಾಗಲಿ ಮೀಸಲಾತಿ ಸಮಸ್ಯೆಯಿದೆ. ಇಂಥ ಸಮಸ್ಯೆ ‘ಸಾಮಾನ್ಯ ವರ್ಗ’ (ಜನರಲ್ ಕೆಟಗರಿ)ದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳಿಗಾಗಿ ಆರಂಭವಾಗಿರುವ ಶೇ. 10 ಮೀಸಲಾತಿ ಸೌಲಭ್ಯ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯ ನಿವಾರಣೆಗೆ ನೆರವಾಗಬಹುದು. ಕರ್ನಾಟಕದ ಉದ್ಯೋಕಾಂಕ್ಷಿ ಯುವಜನತೆಯಲ್ಲಿರುವ ಇಂಗ್ಲಿಷ್‌ ಜ್ಞಾನದ ಕೊರತೆ ಹಾಗೂ ವೃತ್ತಿ ನಿಪುಣತೆಯ ಕೊರತೆಯಿಂದಾಗಿ ಬೆಂಗಳೂರು ಮತ್ತಿತರ ಕಡೆಗಳಲ್ಲಿನ ಖಾಸಗಿ ಕಂಪೆನಿಗಳಲ್ಲಿ, ಐಟಿ ಸಂಸ್ಥೆಗಳಲ್ಲಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆಯೆಂಬ ಸತ್ಯ ಯಾರ ಗಮನಕ್ಕೂ ಬಾರದೆ ಹೋಗಿಲ್ಲ!

ಬೇರೆ ರಾಜ್ಯಗಳ ಅಭ್ಯರ್ಥಿಗಳು ನಮ್ಮಲ್ಲಿಗೆ ಬಂದು ಇಲ್ಲಿನ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಕಡಿಮೆ ಓದಿದ ನಮ್ಮ ಕನ್ನಡಿಗ ಯುವಕರು ಕಾರು ಅಥವಾ ಟ್ಯಾಕ್ಸಿ ಚಾಲಕರಾಗಿಯೋ, ಕಾರು ಕ್ಲೀನರ್‌ಗಳಾಗಿಯೋ, ಆಂಶಕಾಲಿಕ ರಿಯಲ್ ಎಸ್ಟೇಟ್ ಏಜೆಂಗಳಾಗಿಯೋ ದುಡಿಯಬೇಕಾಗಿ ಬಂದಿದೆ.

ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಮುಂಬಯಿ ಅಥವಾ ಪುಣೆಯ ಮೂಲ ಮಹಾರಾಷ್ಟ್ರೀಯರು ಹಣ ಹಾಗೂ ಅಧಿಕಾರ ಹೊಂದಿದ್ದ ಪಾರ್ಸಿಗಳ ಕೈಯಲ್ಲಿ; ಅದೇ ರೀತಿ ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ಗುಜರಾತಿಗಳ ಹಾಗೂ ಮಾರವಾಡಿಗಳ ಕೈಯಲ್ಲಿ ಯಾವ ತೆರನ ಪಾಡುಪಟ್ಟರೋ, ಅಂಥ ಭಯಾನಕ ಪರಿಸ್ಥಿತಿಯೇ ಇಂದು ಕನ್ನಡಿ ಗರನ್ನು ಕಾಡಲು ಸರ್ವಸನ್ನದ್ಧವಾಗಿದೆ.

ಇಂಗ್ಲಿಷ್‌ ತರಗತಿಗಳನ್ನು ಆರಂಭಿಸುವ ವಿಷಯದಲ್ಲಿ ಸರಕಾರ ಧೈರ್ಯದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ನಿರ್ಧಾರ ಎಲ್ಲರಿಗೂ ಮೆಚ್ಚುಗೆಯಾಗಲಿಕ್ಕಿಲ್ಲವೆಂಬುದೇನೋ ಹೌದು. ಸರಕಾರ ಈಗ ಇಡಬೇಕಾದ ಮುಂದಿನ ಹೆಜ್ಜೆಯೆಂದರೆ, ಸರಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಇಂಗ್ಲಿಷ್‌ ಭಾಷೆಯನ್ನು ಕಲಿಸುವುದಕ್ಕಾಗಿ ಉತ್ತಮ ಬೋಧನಾರ್ಹತೆ ಹೊಂದಿರುವ ಶಿಕ್ಷಕರನ್ನು ಈ ಶಾಲೆಗಳತ್ತ ಆಕರ್ಷಿಸಲು ತಕ್ಕ ಕ್ರಮ ಕೈಗೊಳ್ಳುವುದು.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next