ನಾಗ್ಪುರ: ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತವನ್ನು ಸುಲಭದಲ್ಲಿ ಮಣಿಸಿದ ಇಂಗ್ಲೆಂಡ್ ವನಿತೆಯರು ಸರಣಿಯನ್ನು ಸಮಬಲಕ್ಕೆ ತಂದಿದ್ದಾರೆ. ನಾಗ್ಪುರದಲ್ಲಿ ನಡೆದ ಸೋಮವಾರದ ಏಕಪಕ್ಷೀಯ ಸೆಣಸಾಟದಲ್ಲಿ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿದ ಮಿಥಾಲಿ ರಾಜ್ ಪಡೆ 8 ವಿಕೆಟ್‌ಗಳ ಸೋಲಿಗೆ ತುತ್ತಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 37.2 ಓವರ್‌ಗಳಲ್ಲಿ ಕೇವಲ 113 ರನ್ನುಗಳಿಗೆ ಆಲೌಟ್ ಆಯಿತು. ಜವಾಬಿತ್ತ ಇಂಗ್ಲೆಂಡ್ 29 ಓವರ್‌ಗಳಲ್ಲಿ 2 ವಿಕೆಟಿಗೆ 117 ರನ್ ಬಾರಿಸಿತು.
ಸ್ಪಿನ್ನರ್‌ಗಳಾದ ಸೋಫಿ ಎಕಲ್‌ಸ್ಟೋನ್ (14ಕ್ಕೆ 4) ಮತ್ತು ಡೇನಿಯಲ್ ಹ್ಯಾಜೆಲ್ (32ಕ್ಕೆ 4) ದಾಳಿಗೆ ತತ್ತರಿಸಿದ ಭಾರತ ಕುಸಿತ ಕಾಣುತ್ತ ಹೋಯಿತು. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಒಂದೆಡೆ ನಿಂತು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರಾದರೂ ಉಳಿದವರ ವೈಫಲ್ಯದಿಂದ ಇದರಲ್ಲಿ ಯಶಸ್ಸು ಸಿಗಲಿಲ್ಲ. ಮಂಧನಾ ಸರ್ವಾಧಿಕ 42 ರನ್ ಹೊಡೆದರು (57 ಎಸೆತ, 3 ಬೌಂಡರಿ, 1 ಸಿಕ್ಸರ್). ದೀಪ್ತಿ ಶರ್ಮ ಔಟಾಗದೆ 26 ರನ್ ಮಾಡಿದರು. ಎರಡಂಕೆಯ ಮೊತ್ತ ದಾಖಲಿಸಿದ ಮತ್ತೂಬ್ಬ ಆಟಗಾರ್ತಿ ಓಪನರ್ ದೇವಿಕಾ ವೈದ್ಯ (11).
ಇಂಗ್ಲೆಂಡಿಗೆ ಡೇನಿಯಲ್ ವ್ಯಾಟ್ (47) ಮತ್ತು ಟಾಮಿ ಬೇಮಂಟ್ (ಔಟಾಗದೆ 39) ಉತ್ತಮ ಆರಂಭ ಒದಗಿಸಿದರು. ಭರ್ತಿ 15 ಓವರ್ ನಿಭಾಯಿಸಿದ ಈ ಜೋಡಿ ಮೊದಲ ವಿಕೆಟಿಗೆ 73 ರನ್ ಪೇರಿಸಿತು. ಉರುಳಿದ ಎರಡೂ ವಿಕೆಟ್ ಏಕ್ತಾ ಬಿಷ್ಟ್ ಪಾಲಾಯಿತು.