Advertisement

ಆಸೀಸ್‌ ನೆರವಿಗೆ ಸ್ಮಿತ್‌, ಖ್ವಾಜಾ

06:15 AM Jan 06, 2018 | Team Udayavani |

ಸಿಡ್ನಿ: ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಉಸ್ಮಾನ್‌ ಖ್ವಾಜಾ ಅವರ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಸಿಡ್ನಿಯಲ್ಲಿ ಸಾಗುತ್ತಿರುವ 5ನೇ ಟೆಸ್ಟ್‌ನಲ್ಲಿ ಉತ್ತಮ ಹೋರಾಟ ನೀಡುತ್ತಿದೆ.

Advertisement

ಇಂಗ್ಲೆಂಡಿನ 346 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯ ಆರಂಭಿಕ ಆಘಾತ ಅನುಭವಿಸಿದರೂ ಸ್ಮಿತ್‌ ಮತ್ತು ಖ್ವಾಜಾ ಅವರ ಸೊಗಸಾದ ಆಟದಿಂದ ತಂಡ ಚೇತರಿಸಿಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯ 2 ವಿಕೆಟ್‌ ಕಳೆದುಕೊಂಡಿದ್ದು 193 ರನ್‌ ಗಳಿಸಿದೆ. 153 ರನ್‌ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯ ಇನ್ನುಳಿದ 8 ವಿಕೆಟ್‌ ನೆರವಿನಿಂದ ಉತ್ತಮ ಮೊತ್ತ ಪೇರಿಸಲು ಪ್ರಯತ್ನಿಸಲಿದೆ.

5 ವಿಕೆಟಿಗೆ 233 ರನ್ನುಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡವು ಇನ್ನುಳಿದ ಐದು ವಿಕೆಟ್‌ಗಳಿಂದ 113 ರನ್‌ ಗಳಿಸಲು ಯಶಸ್ವಿಯಾಯಿತು. ಮೊಯಿನ್‌ ಅಲಿ, ಕ್ಯುರಾನ್‌ ಮತ್ತು ಸುÌವರ್ಟ್‌ ಬ್ರಾಡ್‌ ಅವರ ಹೋರಾಟದ ಬ್ಯಾಟಿಂಗಿನಿಂದಾಗಿ ಇಂಗ್ಲೆಂಡಿನ ಮೊತ್ತ 300ರ ಗಡಿ ದಾಟುವಂತಾಯಿತು.

ಕಮಿನ್ಸ್‌ 80 ರನ್ನಿಗೆ 4 ವಿಕೆಟ್‌ ಕಿತ್ತರೆ ಸ್ಟಾರ್ಕ್‌ ಮತ್ತು ಹ್ಯಾಝೆಲ್‌ವುಡ್‌ ತಲಾ ಎರಡು ವಿಕೆಟ್‌ ಪಡೆದರು.

ಆಸ್ಟ್ರೇಲಿಯಕ್ಕೆ ಆರಂಭಿಕ ಆಘಾತ
ಆಸ್ಟ್ರೇಲಿಯದ ಆರಂಭ ಉತ್ತಮವಾಗಿರಲಿಲ್ಲ. 1 ರನ್‌ ಗಳಿಸುವಷ್ಟರಲ್ಲಿ ಬ್ರಾಡ್‌ ದಾಳಿಗೆ ಬಾನ್‌ಕ್ರಾಫ್ಟ್ ಕ್ಲೀನ್‌ಬೌಲ್ಡ್‌ ಆದರು. ಇದು ಸ್ಟುವರ್ಟ್‌ ಬ್ರಾಡ್‌ ಅವರ 399ನೇ ವಿಕೆಟ್‌ ಆಗಿದೆ. ಆಬಳಿಕ ವಾರ್ನರ್‌ ಮತ್ತು ಖ್ವಾಜಾ ನಿಧಾನಗತಿಯಲ್ಲಿ ಆಡಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 85 ರನ್‌ ಪೇರಿಸಿ ಬೇರ್ಪಟ್ಟರು. ಅರ್ಧಶತಕ ದಾಖಲಿಸಿದ್ದ ವಾರ್ನರ್‌ ವಿಕೆಟನ್ನು ಆ್ಯಂಡರ್ಸನ್‌ ಹಾರಿಸಿದರು. 104 ಎಸೆತ ಎದುರಿಸಿದ ವಾರ್ನರ್‌ 56 ರನ್‌ ಹೊಡೆದರು.

Advertisement

ಖ್ವಾಜಾ ಮತ್ತು ಸ್ಮಿತ್‌ ಮುರಿಯದ ಮೂರನೇ ವಿಕೆಟಿಗೆ ಈಗಾಗಲೇ 107 ರನ್‌ ಪೇರಿಸಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯ ಚೇತರಿಸಿಕೊಂಡಿತು. 2016ರ ನವೆಂಬರ್‌ ಬಳಿಕ ಮೊದಲ ಬಾರಿ ಶತಕ ದಾಖಲಿಸುವ ಅವಕಾಶ ವೊಂದು ಖ್ವಾಜಾ ಅವರಿಗೆ ಸಿಕ್ಕಿದೆ. ತಾಳ್ಮೆಯ ಆಟವಾಡಿದ ಅವರು 91 ರನ್‌ ಗಳಿಸಿ ಆಡುತ್ತಿದ್ದಾರೆ. 204 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು.

ಖ್ವಾಜಾ ಅವರಿಗೆ ಸಮರ್ಥ ಬೆಂಬಲ ನೀಡಿದ ಸ್ಮಿತ್‌ 44 ರನ್‌ ಗಳಿಸಿ ಆಡುತ್ತಿದ್ದಾರೆ. 2017ರಲ್ಲಿ ಗರಿಷ್ಠ ಟೆಸ್ಟ್‌ ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಿತ್‌ 2018ರಲ್ಲೂ ಇದೇ ಫಾರ್ಮ್ ಮುಂದುವರಿಸಲು ಬಯಸಿದ್ದಾರೆ. 26 ರನ್‌ ತಲುಪಿದ ವೇಳೆ ಅವರು ಟೆಸ್ಟ್‌ನಲ್ಲಿ ಆರು ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು. 111 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿ ಸೋಬರ್ ಮತ್ತು ಬ್ರಾಡ್‌ಮನ್‌ ಜತೆ ಸೇರಿಕೊಂಡರು.

ಸ್ಕೋರು: ಇಂಗ್ಲೆಂಡ್‌ 346 ಮತ್ತು ಆಸ್ಟ್ರೇಲಿಯ 2 ವಿಕೆಟಿಗೆ 193 (ವಾರ್ನರ್‌ 56, ಉಸ್ಮಾನ್‌ ಖ್ವಾಜಾ 91 ಬ್ಯಾಟಿಂಗ್‌, ಸ್ಟೀವನ್‌ ಸ್ಮಿತ್‌ 44 ಬ್ಯಾಟಿಂಗ್‌).

Advertisement

Udayavani is now on Telegram. Click here to join our channel and stay updated with the latest news.

Next