Advertisement

World Cup: 44 ವರ್ಷಗಳ ಬಳಿಕ ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌

12:00 PM Oct 04, 2023 | Team Udayavani |

ಕ್ರಿಕೆಟನ್ನು ವಿಶ್ವಕ್ಕೆ ಪರಿಚಯಿಸಿದ ಇಂಗ್ಲೆಂಡಿಗರು ಕೊನೆಗೂ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಆದರೆ ಇದು ಬರೋಬ್ಬರಿ 44 ವರ್ಷಗಳ ಬಳಿಕ, 12ನೇ ಪಂದ್ಯಾವಳಿಯಲ್ಲಿ ಎಂಬುದನ್ನು ಗಮನಿಸಬೇಕು.

Advertisement

2019ರಲ್ಲಿ ಇಂಗ್ಲೆಂಡ್‌ನ‌ ಪ್ರಧಾನ ಆತಿಥ್ಯದಲ್ಲಿ ನಡೆದ ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ಭಾರೀ ವಿವಾದಕ್ಕೆ ಕಾರಣವಾಯಿತು. ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ನಡುವಿನ ಈ ಪಂದ್ಯ ಟೈಯಲ್ಲಿ ಸಮಾಪ್ತಿಯಾಯಿತು. ಅನಂತರ ಸೂಪರ್‌ ಓವರ್‌ ಕೂಡ ಟೈಗೊಂಡಿತು. ಅಂತಿಮವಾಗಿ ಸೂಪರ್‌ ಓವರ್‌ ಸೇರಿದಂತೆ ಈ ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದ ತಂಡವನ್ನು ವಿಜಯೀ ಎಂದು ತೀರ್ಮಾನಿಸಲಾಯಿತು. ಈ ಅದೃಷ್ಟ ಇಂಗ್ಲೆಂಡ್‌ನ‌ದ್ದಾಯಿತು. ಸತತ 2ನೇ ಫೈನಲ್‌ ಆಡಿ, ದಿಟ್ಟ ಹೋರಾಟ ನೀಡಿಯೂ ಇಂಥದೊಂದು ವಿಚಿತ್ರ ಲೆಕ್ಕಾಚಾರದಲ್ಲಿ ಕಪ್‌ ಎತ್ತಲು ವಿಫ‌ಲವಾದ ನ್ಯೂಜಿಲ್ಯಾಂಡ್‌ ಕ್ರಿಕೆಟಿಗರು ಹಾಗೂ ಅವರ ಅಭಿಮಾನಿಗಳು ದುಃಖದಲ್ಲಿ ಮುಳುಗಿದರು.

ಫೈನಲ್‌ನಲ್ಲಿ ಸೂಪರ್‌ ಓವರ್‌ ಕೂಡ ಟೈ ಆದರೆ ಗರಿಷ್ಠ ಬೌಂಡರಿ ಬಾರಿಸಿದ ತಂಡ ಚಾಂಪಿಯನ್‌ ಆಗಲಿದೆ ಎಂಬ ನಿಯಮವನ್ನು ಐಸಿಸಿ ರೂಪಿಸಿತ್ತಾದರೂ ಇದು ಯಾರಿಗೂ ತಿಳಿದಿರಲಿಲ್ಲ. 1992ರ ಮಳೆ ನಿಯಮವೂ ಇಂಥದೇ ಅಸಮಾಧಾನಕ್ಕೆ ಕಾರಣವಾಗಿತ್ತು. ಇಂಥ ಫ‌ಲಿತಾಂಶ ಕಂಡುಬಂದ ಬಳಿಕವೇ ಈ ನಿಯಮಗಳ ಸಾಧಕ ಬಾಧಕಗಳು, ಇದರ ಪರಿಣಾಮ ಅರಿವಿಗೆ ಬರುವುದು! ಒಂದು ವೇಳೆ ಸೂಪರ್‌ ಓವರ್‌ ಕೂಡ ಟೈ ಆದರೆ, ಮತ್ತೂಂದು ಸೂಪರ್‌ ಓವರ್‌ ಎಸೆಯಬಹುದಿತ್ತು ಅಥವಾ ಫ‌ಲಿತಾಂಶ ಬರುವ ತನಕ ಇದನ್ನು ಮುಂದುವರಿಸಬಹುದಿತ್ತು ಎಂಬುದು ಬಹುತೇಕ ಮಂದಿಯ ಅಭಿಪ್ರಾಯವಾಗಿತ್ತು.

ರೌಂಡ್‌ ರಾಬಿನ್‌ ಲೀಗ್‌
ಇದು 10 ತಂಡಗಳ ನಡುವಿನ ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಪಂದ್ಯಾವಳಿ ಆಗಿತ್ತು. ಅಗ್ರಸ್ಥಾನ ಅಲಂಕರಿಸಿದ 4 ತಂಡಗಳೆಂದರೆ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌. ಮ್ಯಾಂಚೆಸ್ಟರ್‌ ಸೆಮಿಫೈನಲ್‌ನಲ್ಲಿ ಭಾರತ- ನ್ಯೂಜಿಲ್ಯಾಂಡ್‌ ಎದುರಾದವು. ಆದರೆ ಮಳೆಯಿಂದಾಗಿ ಪಂದ್ಯ ಮೀಸಲು ದಿನ ಮುಂದುವರಿಯಿತು. 240 ರನ್‌ ಚೇಸ್‌ ಮಾಡಲಿಳಿದಿದ್ದ ವಿರಾಟ್‌ ಕೊಹ್ಲಿ ಪಡೆ ಮಳೆಗೂ ಮುನ್ನ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮೀಸಲು ದಿನ ಉದುರಲಾರಂಭಿಸಿ 18 ರನ್ನುಗಳ ಸೋಲನುಭವಿಸಿತು.

ಇನ್ನೊಂದು ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ 8 ವಿಕೆಟ್‌ಗಳಿಂದ ಆಸ್ಟ್ರೇಲಿಯವನ್ನು ಹೊರದಬ್ಬಿತು. ಆಸೀಸ್‌ ಮತ್ತೂಮ್ಮೆ ಮಾಜಿ ಆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next