ಮುಂಬಯಿ: “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹೀನಾಯ ಸೋಲು ಅನುಭವಿಸಿದ್ದು, ಜಾಸ್ ಬಟ್ಲರ್ ಬಳಗದ ಹಾದಿ ದುರ್ಗಮಗೊಂಡಿದೆ.
ದಕ್ಷಿಣ ಆಫ್ರಿಕಾ ನೀಡಿದ 400 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ಬೌಲಿಂಗ್ ಬಿಗಿ ದಾಳಿಗೆ ನಲುಗಿ ಒಬ್ಬರಾದಂತೆ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. 22 ಓವರ್ ಗಳಲ್ಲಿ 170 ರನ್ ಗಳಿಸಲಷ್ಟೇ ಶಕ್ತವಾಗಿ 229 ರನ್ ಗಳ ಅಂತರದ ಹೀನಾಯ ಸೋಲನ್ನು ಅನುಭವಿಸಿತು.
ಇದನ್ನೂ ಓದಿ: SAvsENG ಮುಂಬೈನಲ್ಲಿ ರನ್ ಮಳೆ: ಕ್ಲಾಸನ್ ಕ್ಲಾಸ್ ಶೋ; ರೀಜಾ, ಡ್ಯೂಸನ್ ಬ್ಯಾಟಿಂಗ್ ಪವರ್
ಬಲಿಷ್ಠ ತಂಡಗಳೆರಡರ ಅಗ್ನಿಪರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ ನಾಲ್ಕರಲ್ಲಿ ಮೂರನೇ ಪಂದ್ಯ ಗೆದ್ದರೆ, ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಮೂರನೇ ಸೋಲಿನ ಶಾಕ್ ಅನುಭವಿಸಿತು. ಐಡೆನ್ ಮಾರ್ಕ್ರಾಮ್ ಬಳಗ ಬ್ಯಾಟಿಂಗ್, ಬೌಲಿಂಗ್ ವೈಭವವನ್ನು ತೋರಿ ಆಂಗ್ಲರಿಗೆ ತಲೆಯೆತ್ತದಂತೆ ಮಾಡಿದರು.
ಜಾನಿ ಬೈರ್‌ಸ್ಟೋ 10, ಜೋ ರೂಟ್ 2, ಡೇವಿಡ್ ಮಲಾನ್ 6, ಬೆನ್ ಸ್ಟೋಕ್ಸ್ 5, ನಾಯಕ ಜೋಸ್ ಬಟ್ಲರ್ 15, ಹ್ಯಾರಿ ಬ್ರೂಕ್ 17,ಆದಿಲ್ ರಶೀದ್ 10, ಡೇವಿಡ್ ವಿಲ್ಲಿ 12, ಗಸ್ ಅಟ್ಕಿನ್ಸನ್ 35 ರನ್ ಗಳಿಸಿ ಔಟಾದರು. ಮಾರ್ಕ್ ವುಡ್ 17 ಎಸೆತಗಳಲ್ಲಿ 43ರನ್ ಬಾರಿಸಿ 5 ಆಕರ್ಷಕ ಸಿಕ್ಸರ್ ಗಳನ್ನು ಸಿಡಿಸಿ ಕೊನೆಯಲ್ಲಿ ರಂಜಿಸಿದರು. ಕೊನೆಯವರಾಗಿ ಬ್ಯಾಟಿಂಗ್ ಗೆ ಇಳಿಯಬೇಕಾಗಿದ್ದ ರೀಸ್ ಟೋಪ್ಲಿ ಗಾಯಾಳಾಗಿ ನಿವೃತ್ತಿಯಾದ ಕಾರಣ ಬ್ಯಾಟಿಂಗ್ ಗೆ ಬರಲು ಸಾಧ್ಯವಾಗದ ಕಾರಣಕ್ಕೆ 9 ವಿಕೆಟ್ ಕಳೆದುಕೊಂದಾಗಲೇ ಪಂದ್ಯ ಮುಕ್ತಾಯವಾಯಿತು.
ಜೆರಾಲ್ಡ್ ಕೋಟ್ಜೇ 3 ವಿಕೆಟ್ ಪಡೆದು ಮಿಂಚಿದರೆ, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್ ತಲಾ 2, ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ1 ವಿಕೆಟ್ ಪಡೆದು ಬೌಲಿಂಗ್ ಸಾಮರ್ಥ್ಯ ತೋರಿದರು.