ಬರ್ಮಿಂಗ್‌ಹ್ಯಾಮ್: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬರ್ಮಿಂಗ್‌ಹ್ಯಾಮ್ ನಲ್ಲಿ ಶನಿವಾರದಂದು ಇಂಗ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯವಾಡುತ್ತಿದ್ದು, ಐಸಿಸಿ ಟಿ20 ವಿಶ್ವಕಪ್ ಗೆ ಪರಿಪೂರ್ಣ ಸಂಯೋಜನೆಯನ್ನು ಹುಡುಕುವತ್ತ ಗಮನ ಹರಿಸಿದೆ.
ಮೊದಲ ಪಂದ್ಯದಲ್ಲಿ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಇಂದಿನ ಪಂದ್ಯಕ್ಕೆ ಲಭ್ಯರಿದ್ದಾರೆ. ಹೀಗಾಗಿ ಎರಡನೇ ಟಿ20 ಪಂದ್ಯದ ಆಡುವ ಬಳಗದಲ್ಲಿ ಹಲವು ಬದಲಾವಣೆ ನಿರೀಕ್ಷಿಸಬಹುದು.
ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ದೀಪಕ್ ಹೂಡಾ ಅವರನ್ನು ತಂಡದಲ್ಲಿ ಉಳಿಸಿಕೊಂಡರೆ, ನಾಯಕ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಆಡಬಹುದು.
ಇದನ್ನೂ ಓದಿ:ಮೊದಲು ಟಿ20 ತಂಡದಿಂದ ಕೊಹ್ಲಿಯನ್ನು ಕೈಬಿಟ್ಟು ಯುವ ಆಟಗಾರನಿಗೆ ಅವಕಾಶ ನೀಡಿ: ಮಾಜಿ ನಾಯಕ
ಆಲ್ ರೌಂಡರ್ ಕೋಟಾದಲ್ಲಿ ಅಕ್ಷರ್ ಪಟೇಲ್ ಬದಲಿಗೆ ರವೀಂದ್ರ ಜಡೇಜಾ ಆಡಬಹುದು. ವಿಕೆಟ್ ಕೀಪಿಂಗ್ ವಿಭಾಗದಲ್ಲಿ ರಿಷಬ್ ಪಂತ್ ಸ್ಥಾನ ಪಡೆಯುತ್ತಾರಾ ಅಥವಾ ಉತ್ತಮ ಫಾರ್ಮ್ ನಲ್ಲಿರುವ ದಿನೇಶ್ ಕಾರ್ತಿಕ್ ಸ್ಥಾನ ಉಳಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಯುಜಿ ಚಾಹಲ್, ಹರ್ಷಲ್ ಪಟೇಲ್ ಜೊತೆಗೆ ಜಸ್ಪ್ರೀತ್ ಬುಮ್ರಾ ಆಡಲಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಅರ್ಶದೀಪ್ ಸಿಂಗ್ ತಂಡದಲ್ಲಿಲ್ಲ.