ಲಂಡನ್: ಓವಲ್ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ಬೃಹತ್ ಮುನ್ನಡೆಯತ್ತ ಸಾಗಿದೆ. 5 ವಿಕೆಟಿಗೆ 336 ರನ್ ಗಳಿಸಿ 3ನೇ ದಿನದಾಟದ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದ್ದು, 324 ರನ್ ಲೀಡ್ ಹೊಂದಿದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 12 ರನ್ನುಗಳ ಅಲ್ಪ ಹಿನ್ನಡೆಗೆ ಸಿಲುಕಿತ್ತು. ಇಂಗ್ಲೆಂಡ್‌ನ 283ಕ್ಕೆ ಉತ್ತರವಾಗಿ ಆಸ್ಟ್ರೇಲಿಯ 295 ರನ್ ಗಳಿಸಿತ್ತು.
ಇಂಗ್ಲೆಂಡ್‌ನ ದ್ವಿತೀಯ ಸರದಿಯಲ್ಲಿ ಅಗ್ರ ಕ್ರಮಾಂಕದ ಆಟಗಾರರೆಲ್ಲ ಆಸೀಸ್ ಬೌಲಿಂಗ್ ದಾಳಿಯನ್ನು ತಡೆದು ನಿಲ್ಲುವಲ್ಲಿ ಯಶಸ್ವಿಯಾದರು.
ಆರಂಭಕಾರರಾದ ಜಾಕ್ ಕ್ರಾಲಿ 73, ಬೆನ್ ಡಕೆಟ್ 42 ರನ್ ಹೊಡೆದರು. ನಾಯಕ ಬೆನ್ ಸ್ಟೋಕ್ಸ್ ಕೊಡುಗೆ 42 ರನ್. ಮಾಜಿ ನಾಯಕ ಜೋ ರೂಟ್ ಶತಕ ವಂಚಿತರಾದರು. ರೂಟ್ ಗಳಿಕೆ 91 ರನ್. ಅವರ 106 ಎಸೆತಗಳ ಆಟದಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
ಬ್ಯಾಟಿಂಗ್ ವೈಫಲ್ಯ ಕಂಡದ್ದು ಹ್ಯಾರಿ ಬ್ರೂಕ್ ಮಾತ್ರ (7). ಜಾನಿ ಬೇರ್‌ಸ್ಟೊ 71 ರನ್ ಮಾಡಿ ಆಡುತ್ತಿದ್ದಾರೆ. ಇವರೊಂದಿಗೆ ಕ್ರೀಸ್‌ನಲ್ಲಿರುವವರು ಮೊಯಿನ್ ಅಲಿ.