ಲಾರ್ಡ್ಸ್: ಕ್ರಿಕೆಟ್ ಜನಕರ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಕೂಟದ ನಿರ್ಣಾಯಕ ಘಟ್ಟಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕ್ರಿಕೆಟ್ ಕಾಶಿ ಎಂದೆಣಿಸಿಕೊಂಡಿರುವ ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ಗೆಲುವಿನ ನಗೆಯನ್ನು ಬೀರಿ ಕ್ರಿಕೆಟ್ ಜಗತ್ತಿನ ನೂತನ ಅಧಿಪತಿ ಯಾರಾಗುತ್ತಾರೆಂಬುದನ್ನು ಇನ್ನೊಂದೇ ಇನ್ನಿಂಗ್ಸ್ ನಿರ್ಧರಿಸಲಿದೆ.
ವಿಶ್ವಕಪ್ ಇತಿಹಾಸದಲ್ಲಿ ಒಂದು ಸಲವೂ ಕಪ್ ಗೆಲ್ಲದಿರುವ ಎರಡು ತಂಡಗಳ ನಡುವೆ ನಡೆಯುತ್ತಿರುವ ಇಂದಿನ ಮೆಗಾ ಫೈನಲ್ ಸೆಣೆಸಾಟದಲ್ಲಿ ಟಾಸ್ ಗೆಲ್ಲುವ ಅದೃಷ್ಟ ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡದ ಪಾಲಾಯಿತು. ಆದರೆ ಆಂಗ್ಲರ ಬಿಗು ಬೌಲಿಂಗ್ ಮತ್ತು ಚುರುಕಿನ ಫೀಲ್ಡಂಗ್ ಎದುರು ಕಿವೀಸ್ ಆಟ ನಡೆಯಲಿಲ್ಲ. ನಿಧಾನಗತಿಯ ಪಿಚ್ ನಲ್ಲಿ ರನ್ ಗಳಿಸಲು ಒದ್ದಾಡಿದ ನ್ಯೂಝಿಲ್ಯಾಂಡ್ ಬ್ಯಾಟ್ಸ್ ಮನ್ ಗಳು ನಿಗದಿತ 50 ಓವರುಗಳ ಮುಕ್ತಾಯಕ್ಕೆ 8 ವಿಕೆಟ್ ಗಳನ್ನು ಕಳೆದುಕೊಂಡು 241 ರನ್ ಗಳಷ್ಟನ್ನೇ ಕಲೆಹಾಕಿದರು.
ಕಿವೀಸ್ ಪರ ಹೆನ್ರಿ ನಿಕೊಲೋಸ್ ಅವರಿಂದ ಮಾತ್ರವೇ ಅರ್ಧಶತಕ ದಾಖಲಾಯಿತು, ಅವರ ಗಳಿಕೆ 55 ರನ್. ಎಡಗೈ ಬ್ಯಾಟ್ಸ್ ಮನ್ ವಿಲಿಯಮ್ ಲ್ಯಾಥಮ್ (47) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು, ಕೇವಲ 3 ರನ್ ಗಳ ಅಂತರದಲ್ಲಿ ಅವರು ಅರ್ಧಶತಕ ವಂಚಿತರಾದರು. ಉಳಿದಂತೆ ನಾಯಕ ಕೇನ್ ವಿಲಿಯಮ್ಸ್ (30), ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ (19), ನೀಶಮ್ (19) ಮತ್ತು ಗ್ರ್ಯಾಂಡ್ ಹೋಮ್ (16) ಗಳಿಕೆಗಳು ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣವಾಯ್ತು.
ಇಂಗ್ಲಂಡ್ ಪರ ರೋಜರ್ ವೋಕ್ಸ್ ಬಿಗಿ ದಾಳಿ ಸಂಘಟಿಸಿ 3 ವಿಕೆಟ್ ಪಡೆದು ಮಿಂಚಿದರು. ಅವರ ಬೌಲಿಂಗ್ ಫಿಗರ್ 09-0-37-03. ಪ್ಲಂಕೆಟ್ ಅವರು 3 ವಿಕೆಟ್ ಉರುಳಿಸಿದರು. ಉಳಿದಂತೆ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ 01 ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್ ಗಳ ಎಕಾನಮಿ 4.5ರ ಸರಾಸರಿಯಲ್ಲಿದ್ದುದು ಆಂಗ್ಲರ ಬೌಲಿಂಗ್ ಶಿಸ್ತಿಗೆ ಸಾಕ್ಷಿಯಾಗಿತ್ತು.