Advertisement

ಸನತ್‌ ಜಯಸೂರ್ಯ ಅದ್ಭುತ ಬೌಲಿಂಗ್‌ ; 3 ರನ್ನಿಗೆ 4 ವಿಕೆಟ್‌

10:55 PM Sep 13, 2022 | Team Udayavani |

ಕಾನ್ಪುರ: ರೋಡ್‌ ಸೇಫ್ಟಿ ವಿಶ್ವ ಸರಣಿ 2022ಕ್ಕಾಗಿ ವಿಶ್ವದ ಲೆಜೆಂಡ್ಸ್‌ ಆಟಗಾರರು ಪಾಲ್ಗೊಳ್ಳುತ್ತಿರುವ ಕ್ರಿಕೆಟ್‌ ಕೂಟದ ಮಂಗಳವಾರದ ಪಂದ್ಯದಲ್ಲಿ ಸನತ್‌ ಜಯಸೂರ್ಯ ಅವರ ಅದ್ಭುತ ಬೌಲಿಂಗ್‌ ನಿರ್ವಹಣೆಯಿಂದಾಗಿ ಶ್ರೀಲಂಕಾ ಲೆಜೆಂಡ್ಸ್‌ ತಂಡವು ಇಂಗ್ಲೆಂಡ್‌ ಲೆಜೆಂಡ್ಸ್‌ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಲೆಜೆಂಡ್ಸ್‌ ತಂಡವು ಜಯ ಸೂರ್ಯ ದಾಳಿಗೆ ಕುಸಿದು 19 ಓವರ್‌ಗಳಲ್ಲಿ 78 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಶ್ರೀಲಂಕಾ ಲೆಜೆಂಡ್ಸ್‌ ತಂಡವು 14.3 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟದಲ್ಲಿ 79 ರನ್‌ ಗಳಿಸಿ ಜಯಭೇರಿ ಬಾರಿಸಿತು. ದಿಲ್ಶನ್‌ ಮುನವೀರ ಮತ್ತು ಉಪುಲ್‌ ತರಂಗ ಎರಡನೇ ವಿಕೆಟಿಗೆ 39 ರನ್‌ ಪೇರಿಸಿ ತಂಡದ ಗೆಲುವು ಖಚಿತಪಡಿಸಿದರು. ಇದು ಈ ಸರಣಿಯಲ್ಲಿ ಶ್ರೀಲಂಕಾದ 2ನೇ ಗೆಲುವು ಆಗಿದೆ. ಮೊದಲ ಪಂದ್ಯದಲ್ಲಿ ಅದು ಆಸ್ಟ್ರೇಲಿಯ ಲೆಜೆಂಡ್ಸ್‌ ತಂಡವನ್ನು 38 ರನ್ನುಗಳಿಂದ ಸೋಲಿಸಿತ್ತು.

ಸನತ್‌ ಜಯಸೂರ್ಯ ಅವರ ಬೌಲಿಂಗ್‌ ನಿರ್ವಹಣೆ ಈ ಪಂದ್ಯದ ವಿಶೇಷವಾಗಿತ್ತು. ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಎರಡು ಮೇಡನ್‌ ಸಹಿತ ಕೇವಲ 3 ರನ್ನಿಗೆ 4 ವಿಕೆಟ್‌ ಕಿತ್ತು ಗಮನ ಸೆಳೆದರು. ನುವನ್‌ ಕುಲಶೇಖರ ಮತ್ತು ಚತುರಂಗ ಡಿ’ಸಿಲ್ವ ತಲಾ 2 ವಿಕೆಟ್‌ ಪಡೆದರು.

ಈ ಸರಣಿಯ ಬುಧವಾರದ ಪಂದ್ಯದಲ್ಲಿ ಸಚಿನ್‌ ನಾಯಕತ್ವದ ಭಾರತ ಲೆಜೆಂಡ್ಸ್‌ ವೆಸ್ಟ್‌ಇಂಡೀಸ್‌ ಲೆಜೆಂಡ್ಸ್‌ ತಂಡವನ್ನು ಎದುರಿಸಲಿದೆ. ಭಾರತ ಈ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ತಂಡವನ್ನು 61 ರನ್ನುಗಳಿಂದ ಸೋಲಿಸಿತ್ತು. ಈ ಸರಣಿ ಸೆ. 10ರಂದು ಆರಂಭವಾಗಿದ್ದು ಅ. 1ರಂದು ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next