ಸಿಡ್ನಿ: ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಕೂಟದ ಗ್ರೂಪ್ ಒಂದರ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಜಯ ಸಾಧಿಸಿತು. ಶ್ರೀಲಂಕಾ ವಿರುದ್ಧ ಇಂದು ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದಿಂದ ಗೆದ್ದ ಇಂಗ್ಲೆಂಡ್ ಸೆಮಿ ಫೈನಲ್ ಪ್ರವೇಶಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಮಾಡಿದರೆ, ಗುರಿ ಬೆನ್ನತ್ತಿದ್ದ ಬಟ್ಲರ್ ಪಡೆಯು 19.4 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 144 ರನ್ ಮಾಡಿ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾಗೆ ಪತ್ತುನ್ ನಿಸ್ಸಾಂಕ ಉತ್ತಮ ಆರಂಭ ಒದಗಿಸಿದರು. 45 ಎಸೆತ ಎದುರಿಸಿದ ನಿಸ್ಸಾಂಕ ಐದು ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ಆದರೆ ಉಳಿದ ಬ್ಯಾಟರ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ರಾಜಪಕ್ಸೆ ಬಾಲಿಗೊಂದರಂತೆ 22 ರನ್ ಮಾಡಿದರೆ, ಕುಸಾಲ್ ಮೆಂಡಿಸ್ 18 ರನ್ ಮಾಡಿದರು. ಡೆತ್ ಓವರ್ ನಲ್ಲಿ ಇಂಗ್ಲೆಂಡ್ ದಾಳಿಗೆ ನಲುಗಿದ ಲಂಕಾ 8 ವಿಕೆಟ್ ನಷ್ಟಕ್ಕೆ 141 ರನ್ ಮಾತ್ರ ಗಳಿಸಿತು. ಆಂಗ್ಲರ ಪರ ಮಾರ್ಕ್ ವುಡ್ ಮೂರು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.
ಇದನ್ನೂ ಓದಿ:ಮತ್ತೊಮ್ಮೆ ದೊಡ್ಡ ಕೇಕ್ ಕಟ್ ಮಾಡಬೇಕು : ಬರ್ತ್ ಡೇ ಬಾಯ್ ಕೊಹ್ಲಿ ಮಹದಾಸೆ
ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ನಾಯಕ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ 75 ರನ್ ಗಳಿಸಿದರು. ಬಟ್ಲರ್ 28 ರನ್ ಮಾಡಿದರೆ, ಹೇಲ್ಸ್ 47 ರನ್ ಗಳಿಸಿದರು. ಆದರೆ ಇವರ ಬಳಿಕ ಸ್ಪಿನ್ ದಾಳಿಗೆ ಇಂಗ್ಲೆಂಡ್ ಬ್ಯಾಟರ್ ಗಳು ಪರದಾಡಿದರು. ಬಿಗು ದಾಳಿ ಸಂಘಟಿಸಿದ ವಾನಿಂದು ಹಸರಂಗ ಮತ್ತು ಧನಂಜಯ ತಲಾ ಎರಡು ವಿಕೆಟ್ ಕಿತ್ತರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನಿಂತು ಆಡಿದ ಸ್ಟೋಕ್ಸ್ 36 ಎಸೆತಗಳಿಂದ ಅಜೇಯ 42 ರನ್ ಗಳಿಸಿದರು. ಕೊನೆಯ ಓವರ್ ತನಕ ರೋಚಕವಾಗಿ ನಡೆದ ಪಂದ್ಯದಲ್ಲಿ ಲಂಕಾ ಉತ್ತಮ ಫೈಟ್ ನೀಡಿದರೂ ಜಯ ದಕ್ಕಿಸಲಾಗಲಿಲ್ಲ. ಎರಡು ಎಸೆತ ಬಾಕಿ ಇರುವಂತೆ ಇಂಗ್ಲೆಂಡ್ ಜಯಿಸಿತು.
ಈ ಪಂದ್ಯದ ಫಲಿತಾಂಶದಿಂದಾಗಿ ಇಂಗ್ಲೆಂಡ್ ಎರಡನೇ ತಂಡವಾಗಿ ಸೆಮಿ ಫೈನಲ್ ಪ್ರವೇಶ ಪಡೆಯಿತು. ಈ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದ ಹಾಲಿ ಚಾಂಪಿಯನ್, ಆತಿಥೇಯ ಆಸ್ಟ್ರೇಲಿಯಾ ನಿರಾಸೆ ಅನುಭವಿಸಿತು.