Advertisement
ಶನಿವಾರ ವೆಲ್ಲಿಂಗ್ಟನ್‌ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಭಾರೀ ಮೊತ್ತವನ್ನೇನೂ ಪೇರಿಸಲಿಲ್ಲ. ಸರಿಯಾಗಿ 50 ಓವರ್‌ಗಳಲ್ಲಿ 234ಕ್ಕೆ ಆಲೌಟ್ ಆಯಿತು. ಜವಾಬಿತ್ತ ನ್ಯೂಜಿಲ್ಯಾಂಡಿಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 230 ರನ್ ಮಾತ್ರ. ಆಗ ನಾಯಕ ಕೇನ್ ವಿಲಿಯಮ್ಸನ್ 112 ರನ್ ಮಾಡಿ ಅಜೇಯರಾಗಿದ್ದರು (143 ಎಸೆತ, 6 ಬೌಂಡರಿ, 2 ಸಿಕ್ಸರ್).
ಕ್ರಿಸ್ ವೋಕ್ಸ್ ಎಸೆದ ಅಂತಿಮ ಓವರಿನಲ್ಲಿ ನ್ಯೂಜಿಲ್ಯಾಂಡ್ ಜಯಕ್ಕೆ 15 ರನ್ನುಗಳ ಕಠಿನ ಸವಾಲು ಎದುರಾಗಿತ್ತು. ವಿಲಿಯಮ್ಸನ್ ಕ್ರೀಸಿನಲ್ಲಿದ್ದುದರಿಂದ ಗುರಿ ಮುಟ್ಟಬಹುದೆಂಬ ದೂರದ ನಿರೀಕ್ಷೆಯೊಂದಿತ್ತು. ಮೊದಲ 4 ಎಸೆತಗಳಲ್ಲಿ ಕೇನ್ ಒಂದು ಸಿಕ್ಸರ್ ಸಹಿತ 10 ರನ್ ಸಿಡಿಸಿಯಾಗಿತ್ತು. ಉಳಿದೆರಡು ಎಸೆತಗಳಲ್ಲಿ 5 ರನ್ ಬೇಕಿತ್ತು. ಆದರೆ ಈ 2 ಎಸೆತಗಳನ್ನು ಫುಲ್‌ಟಾಸ್ ಹಾಗೂ ವೈಡ್ ಯಾರ್ಕರ್ ಆಗಿ ಎಸೆದ ವೋಕ್ಸ್ ಒಂದೂ ರನ್ ನೀಡದೆ ಕಿವೀಸ್ ಕಪ್ತಾನನನ್ನು ವಂಚಿಸಿದರು. ಇಂಗ್ಲೆಂಡಿಗೆ ರೋಮಾಂಚಕಾರಿ ಜಯವನ್ನು ತಂದಿತ್ತರು. ಒಂದು ಹಂತದಲ್ಲಿ ನ್ಯೂಜಿಲ್ಯಾಂಡ್ ಒಂದೇ ವಿಕೆಟಿಗೆ 80 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ 25ನೇ ಓವರಿನಲ್ಲಿ 103 ರನ್ನಿಗೆ 6 ವಿಕೆಟ್ ಉದುರಿಸಿಕೊಂಡು ಸೋಲಿನ ಸುಳಿಗೆ ಸಿಲುಕಿತು. ಈ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ (41) ನೆರವಿನಿಂದ ಹೋರಾಟವನ್ನು ಜಾರಿಯಲ್ಲಿರಿಸಿದ ವಿಲಿಯಮ್ಸನ್ ಕಿವೀಸ್ ಸರದಿಯನ್ನು ಬೆಳೆಸತೊಡಗಿದರು. ಜತೆಗೆ 11ನೇ ಶತಕವನ್ನೂ ಒಲಿಸಿಕೊಂಡರು. ಆದರೆ “ಮ್ಯಾಚ್ ವಿನ್ನರ್’ ಎನಿಸಿಕೊಳ್ಳಲು ಅವರಿಂದಾಗಲಿಲ್ಲ.
Related Articles
Advertisement
ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ. 48 ರನ್ ಮಾಡಿದ ನಾಯಕ ಮಾರ್ಗನ್ ಅವರದೇ ಹೆಚ್ಚಿನ ಗಳಿಕೆ. ಸ್ಟೋಕ್ಸ್ 39, ಬಟ್ಲರ್ 29 ರನ್ ಹೊಡೆದರು.
ಸರಣಿಯ 4ನೇ ಪಂದ್ಯ ಮಾ. 7ರಂದು ಡ್ಯುನೆಡಿನ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-50 ಓವರ್‌ಗಳಲ್ಲಿ 234 (ಮಾರ್ಗನ್ 48, ಸ್ಟೋಕ್ಸ್ 39, ಬಟ್ಲರ್ 29, ಸೋಧಿ 53ಕ್ಕೆ 3, ಬೌಲ್ಟ್ 47ಕ್ಕೆ 2). ನ್ಯೂಜಿಲ್ಯಾಂಡ್-50 ಓವರ್‌ಗಳಲ್ಲಿ 8 ವಿಕೆಟಿಗೆ 230 (ವಿಲಿಯಮ್ಸನ್ ಔಟಾಗದೆ 112, ಮುನ್ರೊ 49, ಸ್ಯಾಂಟ್ನರ್ 41, ಅಲಿ 36ಕ್ಕೆ 3, ರಶೀದ್ 34ಕ್ಕೆ 2, ವೋಕ್ಸ್ 40ಕ್ಕೆ 2). ಪಂದ್ಯಶ್ರೇಷ್ಠ: ಮೊಯಿನ್ ಅಲಿ.