ನಾರ್ಥ್ಸೌಂಡ್: ಮಹಿಳಾ ಟಿ20 ವಿಶ್ವಕಪ್ 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಅಜೇಯ ಭಾರತವನ್ನು ಅಧಿಕಾರಯುತವಾಗಿ ಮಣಿಸಿ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 19.2 ಓವರ್‌ಗಳಲ್ಲಿ ಅಗ್ಗದ 112 ರನ್‌ಗಳಿಗೆ ಸರ್ವಪತನ ಕಂಡಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರದ್ದೇ ಗರಿಷ್ಠ 34 ರನ್. 23 ಎಸೆತಗಳಲ್ಲಿ 34 ರನ್‌ಗಳಿಸಿ ಅವರು ಔಟಾದರು. ಜೆಮಿಮಾ ರಾಡ್ರಿಗಝ್ 26 ಎಸೆತಗಳಲ್ಲಿ 26 ರನ್ ಕೊಡುಗೆ ಸಲ್ಲಿಸಿದರು.
ಇಂಗ್ಲೆಂಡ್ ಪರ ಬಿಗುದಾಳಿ ನಡೆಸಿದ ಕ್ರಿಸ್ಟಿ ಗೊರ್ಡನ್ 20 ಕ್ಕೆ 2 ವಿಕೆಟ್, ಹೀದರ್ ಕ್‌ನೈಟ್ 9ಕ್ಕೆ 3 ವಿಕೆಟ್ ಮತ್ತು ಸೋಫಿ ಎಕ್ಸ್‌ಲೇಸ್ಟೋನ್ 22ಕ್ಕೆ 2 ವಿಕೆಟ್ ಪಡೆದು ಪ್ರಮುಖ ಆಟಗಾರ್ತಿಯರ ನಿರ್ಗಮನಕ್ಕೆ ಕಾರಣವಾದರು.
113 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 17.1 ಓವರ್‌ನಲ್ಲೇ ಜಯವನ್ನು ತನ್ನದಾಗಿಸಿಕೊಂಡಿತು. ಅಮಿ ಜಾನ್ಸ್ ಅವರು 45 ಎಸೆತಗಳಲ್ಲಿ 53 ರನ್, ನತಾಲಿ ಸ್ಕೀವರ್ 40 ಎಸೆತಗಳಲ್ಲಿ 52 ರನ್‌ಗಳಿಸಿದರು.
ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಕಳೆದ ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.