Advertisement

ಎರಡು ರನ್ನಿನಿಂದ ಸೇಡು ತೀರಿಸಿಕೊಂಡ ಇಂಗ್ಲೆಂಡ್‌

09:52 AM Feb 17, 2020 | sudhir |

ಡರ್ಬನ್‌: ಜೊಹಾನ್ಸ್‌ ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಒಂದು ರನ್‌ ಸೋಲಿಗೆ ಇಂಗ್ಲೆಂಡ್‌ ಡರ್ಬನ್‌ನಲ್ಲಿ 2 ರನ್ನಿನಿಂದ ಸೇಡು ತೀರಿಸಿಕೊಂಡಿದೆ.

Advertisement

ಶುಕ್ರವಾರ ರಾತ್ರಿ ಇಲ್ಲಿನ “ಕಿಂಗ್ಸ್‌ ಮೀಡ್‌ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯ ಅತ್ಯಂತ ರೋಚಕವಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 204 ರನ್‌ ಪೇರಿಸಿದರೆ, ದಕ್ಷಿಣ ಆಫ್ರಿಕಾ ಸಿಡಿಲಬ್ಬರದ ಆರಂಭದ ಹೊರತಾಗಿಯೂ 7 ವಿಕೆಟಿಗೆ 202 ರನ್‌ ಮಾಡಿ ಗೆಲುವನ್ನು ತಪ್ಪಿಸಿಕೊಂಡಿತು. 3 ಪಂದ್ಯಗಳ ಸರಣಿ 1-1 ಸಮಬಲಕ್ಕೆ ಬಂದಿದ್ದು, ನಿರ್ಣಾಯಕ ಮುಖಾಮುಖೀ ರವಿವಾರ ರಾತ್ರಿ ಸೆಂಚುರಿಯನ್‌ನಲ್ಲಿ ನಡೆಯಲಿದೆ.

ಟಾಮ್‌ ಕರನ್‌ ಮ್ಯಾಜಿಕ್‌
ಅಲ್ಲಿ ಲುಂಗಿ ಎನ್‌ಗಿಡಿ ಪ್ರವಾಸಿಗರನ್ನು ಹಿಡಿದು ನಿಲ್ಲಿಸಿದರೆ, ಇಲ್ಲಿ ಟಾಮ್‌ ಕರನ್‌ ಕರಾಮತ್ತು ತೋರಿದರು. ಅಂತಿಮ ಓವರಿನಲ್ಲಿ ಹರಿಣಗಳ ಜಯಕ್ಕೆ 15 ರನ್‌ ಅಗತ್ಯವಿತ್ತು. 5 ವಿಕೆಟ್‌ ಉಳಿದಿತ್ತು. ಪ್ರಿಟೋರಿಯಸ್‌ ಮತ್ತು ಡುಸೆನ್‌ ಕ್ರೀಸಿನಲ್ಲಿದ್ದರು. ಮೊದಲ ಎಸೆತ ಡಾಟ್‌ ಆದ ಬಳಿಕ ಪ್ರಿಟೋರಿಯಸ್‌ ಬೌಂಡರಿ, ಸಿಕ್ಸರ್‌ ಸಿಡಿಸಿ 10 ರನ್‌ ದೋಚಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಉಳಿದ 2 ಎಸೆತಗಳಲ್ಲಿ 3 ರನ್‌ ಮಾಡಿದರೆ ಸಾಕಿತ್ತು. ಆದರೆ ಕರನ್‌ ಈ ಸತತ ಎಸೆತಗಳಲ್ಲಿ ಪ್ರಿಟೋರಿಯಸ್‌ ಮತ್ತು ಫೊರ್ಟೀನ್‌ ವಿಕೆಟ್‌ ಕಿತ್ತು ಆಫ್ರಿಕಾದ ಕೈಯಿಂದ ಗೆಲುವನ್ನು ಕಸಿದೇ ಬಿಟ್ಟರು!

ಸಿಡಿದು ನಿಂತ ಡಿ ಕಾಕ್‌
ಕೇವಲ 22 ಎಸೆತಗಳಿಂದ 65 ರನ್‌ ಸೂರೆಗೈದ ಡಿಕಾಕ್‌ ಹರಿಣಗಳಿಗೆ ಪ್ರಚಂಡ ಆರಂಭ ನೀಡಿದರು. 8 ಸಿಕ್ಸರ್‌, 2 ಬೌಂಡರಿ ಬಾರಿಸಿ ಅಬ್ಬರಿಸಿದರು. 9 ಓವರ್‌ ಮುಗಿಯುವಷ್ಟರಲ್ಲಿ ಸ್ಕೋರ್‌ ನೂರರ ಗಡಿ ದಾಟಿತು. ಜತೆಗಾರ ಟೆಂಬ ಬವುಮ 31, ಮಿಲ್ಲರ್‌ 21, ಡುಸೆನ್‌ ಅಜೇಯ 43, ಪ್ರಿಟೋರಿಯಸ್‌ 25 ರನ್‌ ಬಾರಿಸಿ ಇಂಗ್ಲೆಂಡ್‌ ದಾಳಿಗೆ ಸವಾಲಾದರು. ಆದರೆ ಕೊನೆಯ 2 ಎಸೆತಗಳಲ್ಲಿ ಅದೃಷ್ಟ ಕೈಕೊಟ್ಟಿತು.

ಇಂಗ್ಲೆಂಡ್‌ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ದಾಖಲಾಗಲಿಲ್ಲ. ಸ್ಟೋಕ್ಸ್‌ ಅವರ ಅಜೇಯ 47 ರನ್ನೇ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿತ್ತು (30 ಎಸೆತ, 4 ಬೌಂಡರಿ, 2 ಸಿಕ್ಸರ್‌).

Advertisement

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌-7 ವಿಕೆಟಿಗೆ 204 (ಸ್ಟೋಕ್ಸ್‌ 47, ರಾಯ್‌ 40, ಅಲಿ 39, ಬೇರ್‌ಸ್ಟೊ 35, ಮಾರ್ಗನ್‌ 27, ಎನ್‌ಗಿಡಿ 48ಕ್ಕೆ 3, ಫೆಲುಕ್ವಾಯೊ 47ಕ್ಕೆ 2).
ದಕ್ಷಿಣ ಆಫ್ರಿಕಾ-7 ವಿಕೆಟಿಗೆ 202 (ಡಿ ಕಾಕ್‌ 65, ಡುಸೆನ್‌ ಔಟಾಗದೆ 43, ಬವುಮ 31, ಪ್ರಿಟೋರಿಯಸ್‌ 25, ಜೋರ್ಡನ್‌ 31ಕ್ಕೆ 2, ವುಡ್‌ 39ಕ್ಕೆ 2, ಕರನ್‌ 45ಕ್ಕೆ 2).

ಪಂದ್ಯಶ್ರೇಷ್ಠ: ಮೊಯಿನ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next