ಲಂಡನ್: ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಮುಂಬರುವ ವಿಶ್ವಕಪ್ ಗೆ ತನ್ನ 15 ಜನರ ತಂಡ ಪ್ರಕಟಿಸಿದೆ. ಹಲವು ಅಚ್ಚರಿಗಳನ್ನು ಒಳಗೊಂಡಿರುವ ತಂಡವನ್ನು ಜೋಸ್ ಬಟ್ಲರ್ ಅವರು ಮುನ್ನಡೆಸಲಿದ್ದಾರೆ.
ಕಳೆದ ತಿಂಗಳು ಪ್ರಕಟಿಸಲಾದ ತಮ್ಮ ಸಂಭಾವ್ಯ ತಂಡದಿಂದ ಈ ತಂಡಕ್ಕೆ ಇಂಗ್ಲೆಂಡ್ ಕೆಲವು ಪ್ರಬಲ ಬದಲಾವಣೆ ಮಾಡಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹಿಂತಿರುಗಿದ್ದು, ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸ್ಥಾನ ಪಡೆದಿದ್ದಾರೆ. ಆದರೆ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ತಪ್ಪಿಸಿಕೊಂಡಿದ್ದಾರೆ.
ಕಳೆದ ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದ ಹ್ಯಾರಿ ಬ್ರೂಕ್ ನಿರೀಕ್ಷಿತ ಪ್ರದರ್ಶನ ಮಾತ್ರ ನೀಡಿಲ್ಲ. ಆದರೆ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬ್ರೂಕ್ ಪ್ರದರ್ಶನ ಪರಿಗಣಿಸಿ ಅವರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆನ್ನು ನೋವಿಗೆ ಒಳಗಾಗಿರುವ ಜೇಸನ್ ರಾಯ್ ಜಾಗಕ್ಕೆ ಹ್ಯಾರಿ ಬ್ರೂಕ್ ತಂಡಕ್ಕೆ ಸೇರಿದ್ದಾರೆ.
ಇದನ್ನೂ ಓದಿ:ಬಹಿರ್ದೆಸೆಗೆ ತೆರಳಿದ್ದ ವೇಳೆ ಕಲ್ಲಿದ್ದಲು ಗಣಿ ಭೂ ಭಾಗ ಕುಸಿದು 3 ಮಹಿಳೆಯರು ಜೀವಂತ ಸಮಾಧಿ
ಕೆಲ ವಾರಗಳ ಹಿಂದೆಯಷ್ಟೇ ಏಕದಿನ ನಿವೃತ್ತಿ ಹಿಂಪಡೆದು ಬಂದ ಬೆನ್ ಸ್ಟೋಕ್ಸ್ ಅವರು ನಿರೀಕ್ಷೆಯಂತೆ ವಿಶ್ವಕಪ್ ತಂಡದಲ್ಲಿದ್ದಾರೆ. ಕಿವೀಸ್ ವಿರುದ್ದದ ಸರಣಿಯಲ್ಲಿ ಅವರು ಅಮೋಘ 182 ರನ್ ಇನ್ನಿಂಗ್ ಆಡಿದ್ದರು. ಇದೇ ವೇಳೆ ಡೇವಿಡ್ ಮಲಾನ್ ಅವರು ಕೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ವಿಶ್ವಕಪ್ ಗಾಗಿ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೇರಿಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್ ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.