Advertisement

‘ವರ್ಷದ ನ್ಯೂಝಿಲ್ಯಾಂಡಿಗ’ ಪ್ರಶಸ್ತಿ ರೇಸ್ ನಲ್ಲಿ ಬೆನ್ ಸ್ಟೋಕ್ಸ್!

09:19 AM Jul 20, 2019 | Team Udayavani |

ವೆಲ್ಲಿಂಗ್ಟನ್ : ವಿಚಿತ್ರವೆಂದರೆ ಇದೇ ಇರ್ಬೇಕು. ಈ ಸಲದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ತನ್ನ ದೇಶದ ತಂಡ ಸೋಲಲು ಪ್ರಮುಖ ಕಾರಣಕರ್ತನಾದವ ಆ ದೇಶದ ಉನ್ನತ ಗೌರವ ಪ್ರಶಸ್ತಿಗೆ ಶಿಫಾರಸುಗೊಳ್ಳುವುದೆಂದರೆ… ಹೌದು, ನ್ಯೂಝಿಲ್ಯಾಂಡ್ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಅವರು ಈ ಸಾಲಿನ ‘ವರ್ಷದ ನ್ಯೂಝಿಲ್ಯಾಂಡಿಗ’ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.

Advertisement

ನ್ಯೂಝಿಲ್ಯಾಂಡ್ ಮೂಲದವರಾಗಿದ್ದು ಮತ್ತು ಸದ್ಯ ಇಂಗ್ಲೆಂಡ್ ಕ್ರಿಕೆಟ್ ತಂಡದ ಸದಸ್ಯರಾಗಿರುವ ಸ್ಟೋಕ್ಸ್ ಅವರು ಈ ಬಾರಿಯ ಫೈನಲ್ ನಲ್ಲಿ ಆಂಗ್ಲರ ಜಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಕೂಟದುದ್ದಕ್ಕೂ ಜಬರ್ದಸ್ತ್ ಆಟವನ್ನು ಪ್ರದರ್ಶಿಸಿದ್ದ ಸ್ಟೋಕ್ಸ್ ಅವರು ಕೂಟದಲ್ಲಿ ಒಟ್ಟು 465 ರನ್ ಗಳನ್ನು ಬಾರಿಸಿದ್ದರು ಮತ್ತು ಫೈನಲ್ ನಲ್ಲಿ ನಿರ್ಣಾಯಕ ಆಟವಾಡುವ ಮೂಲಕ 84 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದರು. ನ್ಯೂಝಿಲ್ಯಾಂಡ್ ತಂಡವನ್ನು ಫೈನಲ್ ವರೆಗೆ ಮುನ್ನಡೆಸಿದ ನಾಯಕ ಕೇನ್ ವಿಲಿಯಮ್ಸ್ ಅವರೂ ಸಹ ಈ ಪ್ರಶಸ್ತಿಯ ರೇಸ್ ನಲ್ಲಿದ್ದಾರೆ.

‘ಸ್ಟೋಕ್ಸ್ ಅವರು ಬ್ಲ್ಯಾಕ್ ಕ್ಯಾಪ್ಸ್ ಪರ ಆಟವಾಡದೇ ಇರಬಹುದು, ಆದರೆ ಕ್ರೈಸ್ಟ್ ಚರ್ಚ್ ನಲ್ಲಿ ಅವರು ಜನಿಸಿದ್ದಾರೆ, ಮತ್ತು ಅವರ ಹೆತ್ತವರು ಈಗಲೂ ಇಲ್ಲಿಯೇ ವಾಸಿಸುತ್ತಿದ್ದಾರೆ ಹಾಗೂ ಈ ನೆಲದ ಪೂರ್ವಜರೊಂದಿಗೆ ಸಂಬಂಧವನ್ನು ಹೊಂದಿದವರಾಗಿದ್ದು ಸ್ಟೋಕ್ಸ್ ಅವರು ನಮ್ಮವರೇ ಎಂದು ಹೇಳಿಕೊಳ್ಳುವ ಅನೇಕರು ಇಲ್ಲಿದ್ದಾರೆ’ ಎಂಬುದಾಗಿ ಈ ಪ್ರಶಸ್ತಿಯ ಮುಖ್ಯ ತೀರ್ಪುಗಾರರಾಗಿರುವ ಕ್ಯಾಮರೂನ್ ಬೆನ್ನೆಟ್ ಅವರ ಹೇಳಿಕೆಯನ್ನು ಉದ್ಧರಿಸಿ ಖಾಸಗಿ ವೆಬ್ ಸೈಟ್ ವರದಿ ಮಾಡಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಪ್ರಪ್ರಥಮ ಬಾರಿಗೆ ಆಂಗ್ಲರ ನಾಡಿಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟೋಕ್ಸ್ ಅವರಿಗೆ ಬ್ರಿಟನ್ನಿನ ಅತ್ಯುನ್ನತ ಗೌರವ ನೈಟ್ ಹುಡ್ ಲಭಿಸುವ ಸೂಚನೆಯೂ ಸಿಕ್ಕಿದೆ. ಇಂಗ್ಲೆಂಡ್ ಪ್ರಧಾನಿ ಹುದ್ದೆಯ ರೇಸ್ ನಲ್ಲಿರುವ ಬೋರಿಸ್ ಜಾನ್ಸನ್ ಮತ್ತು ಜೆರಿಮಿ ಹಂಟ್ ಇಬ್ಬರೂ ಸಹ ಸ್ಟೋಕ್ಸ್ ಅವರಿಗೆ ನೈಟ್ ಹುಡ್ ನೀಡಬೇಕೆಂದು ತಮ್ಮ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನ್ಯೂಝಿಲ್ಯಾಂಡ್ ಪ್ರಜೆಗಳು ಈ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಪರಿಗಣಿಸುವ ಅಂತಿಮ 10 ಜನರ ಹೆಸರನ್ನು ಡಿಸೆಂಬರ್ ತಿಂಗಳಲ್ಲಿ ಪ್ರಕಟಿಸಲಾಗುತ್ತದೆ ಮತ್ತು 2020ರ ಫೆಬ್ರವರಿಯಲ್ಲಿ ಈ ಪ್ರಶಸ್ತಿಯ ವಿಜೇತರ ಹೆರಸನ್ನು ಘೋಷಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next