ಯಲಹಂಕ: “ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳ ನಡುವೆ ಇರುವ ತಡೆಗೋಡೆಗಳನ್ನು ಕೆಡವುವ ಕಾಲ ಸನ್ನಿಹಿತವಾಗಿದೆ. ಹೊಸದಾಗಿ ಆವಿರ್ಭವವಾಗುತ್ತಿರುವ ಸಂಶೋಧನೆಗಳು ಬಹುಶಾಸ್ತ್ರೀಯ ಅಧ್ಯಯನಗಳನ್ನಾಧರಿಸಿವೆ,’ ಎಂದು ಭಾರತೀಯ ವಿಜಾnನ ಸಂಸ್ಥೆಯ ವೈಮಾನಿಕ ತಂತ್ರಜಾnನ ವಿಭಾಗದ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಪ್ರೊ. ಎಸ್. ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಸಿವಿಲ್, ಏರೊನಾಟಿಕಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಆವಿರ್ಭವಗೊಳ್ಳುತ್ತಿರುವ ನವನವೀನ ಸಂಶೋಧನೆಗಳ ಕುರಿತು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು, ಬೋಧಕರು ಹಾಗೂ ಸಂಶೋಧಕರು ತಂತಮ್ಮ ಅಧ್ಯಯನದ ವಿಷಯಗಳಿಗಷ್ಟೇ ಸೀಮಿತಗೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು.
ಪ್ರತಿಯೊಂದು ವಿಷಯವೂ ತನ್ನದೇ ಆದ ಮಹತ್ವ ಹೊಂದಿರುತ್ತದೆ. ಈ ಮಹತ್ವ ಪ್ರಕಟಗೊಳ್ಳುವುದು ಬಹು ಶಾಸ್ತ್ರೀಯ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಪ್ರಾತಿನಿಧ್ಯ ನೀಡುವ ವೇದಿಕೆಗಳಲ್ಲಿ ಮಾತ್ರ. ಪರಸ್ಪರ ಕೊಡುಕೊಳ್ಳುವಿಕೆಯಿಂದ ಜನೋಪಯೋಗಿ ತಂತ್ರಜ್ಞಾನದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಅರಿಯಬೇಕು’, ಎಂದರು
ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಮಾತನಾಡಿ, “ತಂತ್ರಜ್ಞಾನದ ವಿವಿಧ ವಿಭಾಗಗಳು ತಮ್ಮ ಜ್ಞಾನಗಳನ್ನು ಪರಸ್ಪರ ಹಂಚಿಕೊಳ್ಳುವ ಅನಿವಾರ್ಯತೆ ಒದಗಿದೆ. ಸವಾಲುಗಳನ್ನು ಎದುರಿಸಲು ಸಂಘಟಿತ ಪ್ರಯತ್ನ ಅವಶ್ಯ. ಆಗಲೇ ಮನಕುಲದ ಒಳತಿಗೆ ಬೇಕಾದ ಸೌಲಭ್ಯಗಳು ಸೃಷ್ಟಿಸಲ್ಪಡುತ್ತವೆ,’ ಎಂದರು.
ದೇಶ ವಿದೇಶಗಳಿಂದ ಬಂದಿದ್ದ ಒಟ್ಟು 56 ವಿದ್ವಾಂಸರರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಅಧಿವೇಶನದಲ್ಲಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರತಿಷ್ಠಿತ ಪತ್ರಿಕೆ “ಮ್ಯಾಕ್‌ಗ್ರಾಹಿಲ್ ಎಜುಕೇಷನ್’ ಹೊರತಂದಿರುವ ಪ್ರಬಂಧಗಳ ಹೊತ್ತಗೆಯನ್ನು ಪ್ರೊ. ಎನ್.ಆರ್. ಶೆಟ್ಟಿ ಬಿಡುಗಡೆ ಮಾಡಿದರು.
ರಕ್ಷಣಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಎಲ್.ಎಂ. ಪಟ್ನಾಯಕ್ ಹಾಗೂ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಸುಧಾರಾವ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಏರೋನಾಟಿಕಲ್ ಎಂಜಿನಿಯರಿಂಗ್ ಮುಖ್ಯಸ್ಥ ಪ್ರೊ. ಎಸ್. ವೆಂಕಟೇಶ್ವರನ್ ಹಾಜರಿದ್ದರು.