Advertisement

ಆನ್‌ಲೈನ್‌ ಪರೀಕ್ಷೆಗೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಆಕ್ಷೇಪ

11:52 AM Jul 05, 2020 | Suhan S |

ಹುಬ್ಬಳ್ಳಿ: ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಜು. 21ರಿಂದ ಆನ್‌ಲೈನ್‌ ಪರೀಕ್ಷೆಗೆ ಮುಂದಾಗಿದ್ದು, ಇದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆನ್‌ಲೈನ್‌ ಪರೀಕ್ಷೆಗೆ ಹಾಜರಾಗದಿರಲು ಬಹುತೇಕ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ವಿವಿಧ ವಿಭಾಗಗಳ 2ನೇ, 4ನೇ ಹಾಗೂ 6ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಜು. 21ರಿಂದ ಆನ್‌ಲೈನ್‌ ಮೂಲಕ ನಡೆಸಲು ವಿವಿ ನಿರ್ಧರಿಸಿದೆ. ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ಗ್ರಾಮೀಣ ಸೇರಿದಂತೆ ವಿವಿಧೆಡೆಗಳಲ್ಲಿರುವ ವಿದ್ಯಾರ್ಥಿಗಳು ಮಾತ್ರ, ಆನ್‌ಲೈನ್‌ ಪರೀಕ್ಷೆ ಬೇಡ. ಒಂದು ತಿಂಗಳು ಆಫ್ಲೈನ್‌ ಬೋಧನೆ ನಂತರ ಆಫ್ ಲೈನ್‌ ಪರೀಕ್ಷೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಟ್ವಿಟರ್‌ ಅಭಿಯಾನ ಕೈಗೊಂಡಿದ್ದಾರೆ.

ಲಾಕ್‌ಡೌನ್‌ ಕಾರಣದಿಂದಾಗಿ ಈಗಾಗಲೇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಬೋಧನೆ ಕೈಗೊಳ್ಳಲಾಗಿದ್ದು, ಇದೀಗ ಆನ್‌ಲೈನ್‌ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಪರೀಕ್ಷೆಗೆ ಪೂರಕವಾಗಿ ಜು.6 ಮತ್ತು 7ರಂದು ಅಣಕು ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, 21ರಿಂದ ಪರೀಕ್ಷೆ ನಡೆಯಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದಾಗಿ ವಿವಿ ಹೇಳುತ್ತಿದೆ.

ಆದರೆ, ವಿದ್ಯಾರ್ಥಿಗಳು ಆನ್‌ಲೈನ್‌ ಬೋಧನೆ ಬಹುತೇಕರಿಗೆ ಅರ್ಥವಾಗಿಲ್ಲ. ಆನ್‌ ಲೈನ್‌ ಬೋಧನೆ ಸಂದರ್ಭದಲ್ಲೇ ಸರಿಯಾಗಿ ಕೇಳದಿರುವುದು ಇನ್ನಿತರ ಸಮಸ್ಯೆಗಳು ಎದುರಾಗಿದ್ದವು. ಅದು ಉಪನ್ಯಾಸಕರಿಗೂ ಗೊತ್ತಿದೆ. ವಿಷಯವೇ ಅರ್ಥವಾಗಿಲ್ಲ ಎಂದ ಮೇಲೆ ಪರೀಕ್ಷೆ ಬರೆಯುವುದಾದರೂ ಹೇಗೆ, ಬೋಧನೆ ಸಂದರ್ಭದಲ್ಲೇ ಆನ್‌ಲೈನ್‌ ಸಮಸ್ಯೆ ನೀಡಿದೆ. ಪರೀಕ್ಷೆ ಸಂದರ್ಭದಲ್ಲಿ ಇಂಟರ್‌ನೆಟ್‌ ಕೈಕೊಟ್ಟರೆ ಏನು ಮಾಡುವುದು ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.

ಜು.21ರಿಂದ ನಡೆಯುವ ಪರೀಕ್ಷೆ 50 ಅಂಕಗಳದ್ದಾಗಿದ್ದು, ಒಂದೂವರೆ ತಾಸಿನ ಅವಧಿಯದ್ದಾಗಿದೆ. ವಿವಿ ಪ್ರಕಾರ ಆನ್‌ಲೈನ್‌ ಪರೀಕ್ಷೆಗೆ ವಿದ್ಯಾರ್ಥಿಗಳು ಒಂದು ಲ್ಯಾಪ್‌ಟಾಪ್‌, ಒಂದು ಸ್ಮಾರ್ಟ್‌ಫೋನ್‌, ಕನಿಷ್ಠ 3 ಜಿಬಿ ಡಾಟಾ ಸಾಮರ್ಥ್ಯದೊಂದಿಗೆ ತಯಾರು ಇರಬೇಕಾಗಿದೆ. ಪರೀಕ್ಷೆಯನ್ನು ಒಂದೂವರೆ ತಾಸಿನಲ್ಲಿ ಪೂರ್ಣಗೊಳಿಸಬೇಕಾಗಿದೆ. ಈ ವೇಳೆ ಇಂಟರ್‌ನೆಟ್‌ ಕೈಕೊಟ್ಟರೆ, ಮರು ಸಂಪರ್ಕ, ಪರೀಕ್ಷೆ ಮೇಲ್ವಿಚಾರಕರನ್ನು ಸಂಪರ್ಕಿಸಿ ಕೀ ಸಂಖ್ಯೆ ಪಡೆಯುವುದಕ್ಕೆ ಸಮಯ ಹೋದರೆ, ಸಮಯದೊಳಗೆ ಉತ್ತರಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌, ವಿದ್ಯುತ್‌ ಸಮಸ್ಯೆ ಇದ್ದು, ಅವರು ಹೇಗೆ ಆನ್‌ಲೈನ್‌ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂಬುದು ವಿದ್ಯಾರ್ಥಿಗಳ ಅನಿಸಿಕೆ.

Advertisement

ಯುಜಿಸಿ ಮಾರ್ಗಸೂಚಿಯಂತೆ ಒಂದು ತಿಂಗಳು ಆಫ್ಲೈನ್‌ ಕ್ಲಾಸ್‌ ತೆಗೆದುಕೊಂಡು, ಆಫ್ ಲೈನ್‌ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬುದಾಗಿದೆ. ಆದರೆ, ವಿವಿಯವರು ಇದಾವುದನ್ನು ಗಣನೆಗೆ ತೆಗೆದುಕೊಳ್ಳದೆ, ವಿದ್ಯಾರ್ಥಿಗಳಿಗೆ ಮೇಲ್‌ ಮೂಲಕ ಸಂದೇಶ ರವಾನಿಸಿ, ಆನ್‌ಲೈನ್‌ ಪರೀಕ್ಷೆ ಎಂದು ತಿಳಿಸಿದ್ದಾರೆ. ವಿವಿಧ ಕಡೆ ಇರುವ ವಿದ್ಯಾರ್ಥಿಗಳಿಗೆ ಇದು ಕಷ್ಟವಾಗಲಿದೆ. ವಿದ್ಯಾರ್ಥಿಗಳ ಜತೆ ಚರ್ಚಿಸದೆ ಏಕಾಏಕಿ ಪರೀಕ್ಷೆ ಘೋಷಣೆಮಾಡಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಟ್ವಿಟರ್‌ ಅಭಿಯಾನ ನಡೆಸಿದ್ದು, ಆನ್‌ಲೈನ್‌ ಪರೀಕ್ಷೆಗೆ ಶೇ.95 ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಬೇಕಾದ ಪುರಾವೆಗಳು ಇವೆ. ಇಷ್ಟಾದರೂ ವಿವಿ ಒಪ್ಪುತ್ತಿಲ್ಲ. ಸಂಬಂಧಿಸಿದ ವಿಭಾಗಗಳ ಮುಖ್ಯಸ್ಥರನ್ನು ಸಂಪರ್ಕಿಸಿದರೆ ಸ್ಪಂದಿಸುತ್ತಿಲ್ಲ. ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್‌ ಅಣಕು ಪರೀಕ್ಷೆ ಹಾಗೂ ಜು. 21ರಿಂದ ನಡೆಯುವ ಪರೀಕ್ಷೆಗೆ ಗೈರು ಹಾಜರಾಗಲು ನಿರ್ಧರಿಸಿದ್ದಾಗಿ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next