ಬೆಂಗಳೂರು:2019ರಲ್ಲಿ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಭಯೋತ್ಪಾದಕ ದಾಳಿಯ ಘಟನೆ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ(22ವರ್ಷ)ಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಐದು ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ:ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ…ಈ ಯುವತಿ ಯಾರು?
ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ(ಎನ್ ಐಎ ಪ್ರಕರಣಗಳ ವಿಚಾರಣೆಯ ವಿಶೇಷ ಜಡ್ಜ್) ಗಂಗಾಧರ ಸಿ.ಎಂ ಈ ಆದೇಶ ನೀಡಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಘಟನೆ ನಡೆದ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಫೈಝ್ ರಶೀದ್ ಗೆ 19 ವರ್ಷ. ಈತ ಕಳೆದ ಮೂರುವರೆ ವರ್ಷಗಳಿಂದ ಜೈಲಿನಲ್ಲಿದ್ದಾನೆ. ಫೈಝ್ ರಶೀದ್ 3ನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, 2019ರ ಫೆಬ್ರವರಿಯಲ್ಲಿ ಬಂಧನಕ್ಕೊಳಗಾಗಿದ್ದ.
ಹುತಾತ್ಮ ಯೋಧರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಫೈಝ್ ಕಾಯ್ದೆ 153ಎ ಮತ್ತು ಕಾಯ್ದೆ 201ರ ಅಡಿ ದೋಷಿ ಎಂದು ಕೋರ್ಟ್ ತಿಳಿಸಿದೆ. ತನಿಖೆಯ ವೇಳೆ ಫೈಝ್ ಮೊಬೈಲ್ ಅನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಫೈಝ್ ಮೊಬೈಲ್ ನಲ್ಲಿ ಮತ್ತಷ್ಟು ಅವಹೇಳನಕಾರಿ ಕಮೆಂಟ್ಸ್, ಪೋಸ್ಟ್ ಗಳು ಪತ್ತೆಯಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ವಿಶೇಷ ಕೋರ್ಟ್ ಗೆ ಆರೋಪಪಟ್ಟಿ ಸಲ್ಲಿಸಿದ್ದರು. 2019ರ ಫೆಬ್ರವರಿ 26ರಂದು ಪುಲ್ವಾಮಾದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದು, 40 ಯೋಧರು ಹುತಾತ್ಮರಾಗಿದ್ದರು.