Advertisement

ಕನ್ನಡ ಮಾಧ್ಯಮದಲ್ಲಿ  ಎಂಜಿನಿಯರಿಂಗ್‌: ವಿಟಿಯು ಸಿದ್ಧತೆ

01:00 AM Jul 09, 2021 | Team Udayavani |

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್‌ ಮಾಧ್ಯಮಗಳು ಪ್ರತ್ಯೇಕವಿರುವಂತೆ 2021-22ನೇ ಸಾಲಿನಿಂದ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗಗಳು ಪ್ರತ್ಯೇಕವಾಗಿರಲಿವೆ. ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿರಲಿದೆ.

Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಹಿನ್ನೆಲೆ ಯಲ್ಲಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ನೀಡಲು ನಿರ್ಧರಿಸಿದ್ದು, ರಾಜ್ಯದಲ್ಲೂ ಕನ್ನಡದಲ್ಲಿ ಎಂಜಿನಿಯರಿಂಗ್‌ ಬೋಧನೆ, ಕಲಿಕೆ

ಹಾಗೂ ಪರೀಕ್ಷೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ. ರಾಜ್ಯದಲ್ಲಿ ಸದ್ಯ ಕನ್ನಡ ಮಾಧ್ಯಮ ದಲ್ಲಿ ಎಂಜಿನಿಯರಿಂಗ್‌ ಪದವಿ ನೀಡುವ ಒಂದೇ ಒಂದು ಶಿಕ್ಷಣ ಸಂಸ್ಥೆ ಇಲ್ಲ. ಕನ್ನಡದಲ್ಲಿ ಕಲಿಯಲು ಪಠ್ಯ ಅಳವಡಿಸಿದ್ದರೂ ಕನ್ನಡದಲ್ಲಿ ಪದವಿ ನೀಡುವ ವ್ಯವಸ್ಥೆ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಐಸಿಟಿಇ ತೀರ್ಮಾನದಂತೆ 2021-22ನೇ ಸಾಲಿನಿಂದ ವಿಟಿಯು ತನ್ನ ಅಧೀನದ ಅರ್ಹ ಎಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಕನ್ನಡದಲ್ಲಿ ಪದವಿ ಶಿಕ್ಷಣ ಆರಂಭಿಸಲು ನಿರ್ಧರಿಸಿದೆ.

ಮಾನದಂಡವೇನು?:

Advertisement

ಯಾವ ಎಂಜಿನಿಯರಿಂಗ್‌ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯು ಕನ್ನಡ ಮಾಧ್ಯಮ ದಲ್ಲಿ ಎಂಜಿನಿಯರಿಂಗ್‌ ಪದವಿ ಆರಂಭಿಸಲು ನಿರ್ಧರಿಸುತ್ತದೋ, ಆ ವಿಭಾಗವು ಕಡ್ಡಾಯ ವಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ)ಯಿಂದ ಮಾನ್ಯತೆ ಪಡೆದಿರಬೇಕು. ಎನ್‌ಬಿಎ ಮಾನ್ಯತೆ ಇಲ್ಲದೇ ಯಾವುದೇ ಕೋರ್ಸ್‌ ಬೋಧಿಸಿದರೂ ಪದವಿ ಪೂರೈಸಿದ ಅನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವಾಗ ಸಮಸ್ಯೆಯಾಗಲಿದೆ. ಹೀಗಾಗಿ ಎನ್‌ಬಿಎ ಮಾನ್ಯತೆ ಪಡೆದೇ ಕನ್ನಡ ಮಾಧ್ಯಮ ಪದವಿ ಆರಂಭಿಸಬೇಕಾಗುತ್ತದೆ. ಪ್ರತೀ  ಅರ್ಹ ಸಂಸ್ಥೆಗೆ ಒಂದು ವಿಭಾಗಕ್ಕೆ ಸೀಮಿತವಾಗಿ 30ರಿಂದ 60 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ನೀಡಲಾಗುತ್ತದೆ. ಕನ್ನಡ ಮಾಧ್ಯಮಕ್ಕೆ ದಾಖಲಾದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ತರಗತಿಗೆ ಬೋಧನೆ ಮತ್ತು ಪರೀಕ್ಷೆ ಕನ್ನಡದಲ್ಲೇ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ರೀತಿಯಲ್ಲೂ ಸಿದ್ಧ ಈ ಸಾಲಿನಲ್ಲಿ ಎಷ್ಟು ಕಾಲೇಜುಗಳು ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಪದವಿ ನೀಡಲು ಮುಂದೆ ಬರುತ್ತವೆ ಎನ್ನು ವುದು ಇನ್ನಷ್ಟೇ  ತಿಳಿಯಲಿದೆ. ಆದರೆ ವಿಟಿಯು ನಿಂದ ಮೊದಲ  ವರ್ಷದ ಎಲ್ಲ ವಿಷಯಗಳಿಗೂ ಕನ್ನಡ  ಮಾಧ್ಯಮದ ಪಠ್ಯ ಪುಸ್ತಕ ವನ್ನು ಸಿದ್ಧಪಡಿಸಲಾಗು ತ್ತದೆ. ಕನ್ನಡ ಮಾಧ್ಯಮದಲ್ಲಿ ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಎಲ್ಲ ಪಠ್ಯಕ್ರಮವನ್ನು ಎಐಸಿಟಿಇ ಮಾರ್ಗದರ್ಶನದಂತೆ ಕನ್ನಡ ಭಾಷೆಗೆ ಅನುವಾದಿಸುವ ಕಾರ್ಯ ನಡೆದಿದೆ ಎಂದು ವಿಟಿಯು ಕುಲಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿ  ಈವರೆಗೂ ಕನ್ನಡ ಮಾಧ್ಯಮ ಬೋಧಿಸುವ ಒಂದೇ ಒಂದು ಎಂಜಿನಿಯರಿಂಗ್‌ ಕಾಲೇಜು ಇರಲಿಲ್ಲ. 2021-22ನೇ ಸಾಲಿಗೆ ಕನ್ನಡ ಮಾಧ್ಯಮದಲ್ಲಿ  ಎಂಜಿನಿಯರಿಂಗ್‌ ಬೋಧನೆ, ಕಲಿಕೆ ಹಾಗೂ ಪರೀಕ್ಷೆ ನಡೆಸಲು ಎಂಜಿನಿಯರಿಂಗ್‌ ಕಾಲೇಜುಗಳಿಗೆ ಮಾಹಿತಿ ನೀಡಿದ್ದೇವೆ.-ಡಾ| ಎ.ಎಸ್‌. ದೇಶಪಾಂಡೆ, ಕುಲಸಚಿವ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next