ಚಾಮರಾಜನಗರ: ಮೇ 31ರಂದು ನಿವೃತ್ತರಾದ ಚಾಮರಾಜನಗರ ವಿಭಾಗ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವಾಸುದೇವನ್ ಅವರು ತಮ್ಮ ಪುತ್ರನಿಗೆ ಕಾಮಗಾರಿಗಳ ಟೆಂಡರ್ ನೀಡಿರುವುದು ಮಾತ್ರವಲ್ಲದೇ ಅನೇಕ ನಿಯಮಗಳನ್ನು ಉಲ್ಲಂಘಿಸಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ತಾಲೂಕು ಸಿವಿಲ್ಗುತ್ತಿಗೆ ದಾರರ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಸುದೇವನ್ ಅವರು ತಾವು ನಿವೃತ್ತಿ ಹೊಂದುವ ಹಿಂದಿನ ದಿನ ತಮ್ಮ ಪುತ್ರ ವಿಭವ್ ವಿ. ಮಾವತೂರ್ ಅವರಿಗೆ 20.11 ಲಕ್ಷ ರೂ. ಮೊತ್ತದ ಟೆಂಡರ್ ಅನ್ನು ನೀಡಿದ್ದಾರೆ.ಟೆಂಡರ್ ನೀಡುವಾಗ ನಿಯಾಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದರು.
ಕಾಮಗಾರಿಯ ಗುತ್ತಿಗೆ ವಹಿಸಿಕೊಳ್ಳುವ ಗುತ್ತಿಗೆದಾರ ನಿಗದಿತ ವರ್ಷಗಳ ಕಾಲ ಇಲಾಖೆಯಲ್ಲಿ ಗುತ್ತಿಗೆದಾರರಾಗಿರಬೇಕು ಎಂಬ ಪ್ರಮಾಣಪತ್ರ ಹೊಂದಿರಬೇಕಾದದ್ದು ಕಡ್ಡಾಯ. ಆದರೆ ವಾಸುದೇವನ್ ಅವರು ಕಾಮಗಾರಿ ಕೈಗೊಳ್ಳಲು ಅನುಭವವವೇ ಇರದ ತಮ್ಮ ಪುತ್ರನಿಗೆ 2017 ರಲ್ಲಿ ಪರವಾನಗಿ ಕೊಡಿಸಿದ್ದಾರೆ,. ಚಾರ್ಟಡ್ ಅಕೌಂಟೆಂಟ್ ಒಬ್ಬರು 2017-18 ನೇ ಸಾಲಿನಲ್ಲಿ 45 ಲಕ್ಷ ರೂ. 2018-19 ನೇ ಸಾಲಿನಲ್ಲಿ 1.35 ಕೋಟಿ ರೂ.ಗಳ ಕಾಮಗಾರಿ ಕೈಗೊಂಡಿದ್ದಾರೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ. ನಿವೃತ್ತಿಯಾಗುವ ದಿನ ಯಾನಗಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ 20.11 ಲಕ್ಷ ರೂ.ಗಳ ಟೆಂಡರ್ ಅನ್ನು ಅಂಗೀಕರಿಸಿರುವುದಾಗಿ ತಮ್ಮ ಪುತ್ರನಿಗೆ ತಾವೇ ಟೆಂಡರ್ ಅಂಗೀಕರಿಸಿರುವ ಬಗ್ಗೆ ಪತ್ರ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಬೀದಿಯಲ್ಲಿ ಚರಂಡಿನಿರ್ಮಾಣದ 20 ಲಕ್ಷ ರೂ.ಗಳ ಕಾಮಗಾರಿಯನ್ನು ಬಿಸಲವಾಡಿ ಗುತ್ತಿಗೆದಾರರೊಬ್ಬರು ನಡೆಸಿದ್ದರು. ಅದೇ ಕಾಮಗಾರಿಗೆ ತಮ್ಮ ಪುತ್ರನ ಹೆಸರನ್ನು ಸೇರಿಸಿ ಕಾಮಗಾರಿ ದೃಢೀಕರಣ ಪತ್ರವನ್ನು ಪಡೆಯಲಾಗಿದೆ. ಈ ಕಾಮಗಾರಿ ದೃಢೀಕರಣ ಪತ್ರವನ್ನು ಮುಂದಿನ ಕಾಮಗಾರಿಗಳನ್ನು ಪಡೆದುಕೊಳ್ಳಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
50 ಸಾವಿರ ಮೇಲ್ಪಟ್ಟ ಕಾಮಗಾರಿಗಳನ್ನು ಇ ಪ್ರೊಕ್ಯೂರ್ ಮೆಂಟ್‌ನಲ್ಲಿ ಟೆಂಡರ್ ಕರೆಯುವ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಬೇಕು. ಆದರೆ ಹಿಂದಿನ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಅವರು ರಹಸ್ಯ ಟೆಂಡರ್ ಕರೆದು ಕೋಟ್ಯಂತರ ರೂ.ಗಳ ಅಕ್ರಮವೆಸಗಿದ್ದಾರೆ ಎಂದು ಆಪಾದಿಸಿದರು.
ಕಾರ್ಯಪಾಲಕ ಎಂಜಿನಿಯರ್ ನಿವೃತ್ತರಾಗುವ ಕೊನೆಯ ಆರು ತಿಂಗಳ ಅವಧಿಯಲ್ಲಿ ಹಣಕಾಸು ವ್ಯವಹಾರ ನಡೆಸುವಂತಿಲ್ಲ. ಹೀಗೆ ಮಾಡದಂತೆ ಕೀ ಲಾಕ್ ಮಾಡಲಾಗುತ್ತದೆ. ಆದರೂ ಈ ಅವಧಿಯಲ್ಲಿ ಹಣಕಾಸು ನಡೆಸಿದ್ದಾರೆ. ಅಲ್ಲದೇ ತಮ್ಮ ಸಂಬಂಧಿಕರಿಗೆ ಟೆಂಡರ್ ನೀಡುವಂತಿಲ್ಲ. ಆದರೆ ಇವರು ತಮ್ಮ ಪುತ್ರನಿಗೇ ಟೆಂಡರ್ ನೀಡಿದ್ದಾರೆ ಎಂದರು.
ಪ್ರಸ್ತುತ ಕಾರ್ಯಪಾಲಕ ಎಂಜಿನಿಯರ್ ಅವರು ಇಲಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಹಗರಣದ ಬಗ್ಗೆ ಆಮೂಲಾಗ್ರವಾಗಿ ವಿಚಾರಣೆಮಾಡಿ, ದುರುಪಯೋಗವಾಗಿರುವ ಹಣವನ್ನು ಸರ್ಕಾರಕ್ಕ್ಕೆ ವಾಪಸ್ ಕಟ್ಟಿಸಿಕೊಡಬೇಕು, ಈಗಾಗಲೇ ಕರೆದಿರುವ ಟೆಂಡರ್ ರದ್ದು ಮಾಡಿ, ಹೊಸದಾಗಿ ಟೆಂಡರ್ ಕರೆಯಬೇಕು.
ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಲೋಕೋಪಯೋಗಿ ಇಲಾಖೆಯ ಕಚೇರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು. ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಬಂಗಾರು, ಖಜಾಂಚಿ ಎಂ.ಎಸ್.ಮಾದಯ್ಯ, ಉಪಾಧ್ಯಕ್ಷ ಬಂಗಾರು, ನಿರ್ದೇಶಕ ಕೆ.ಎಲ್.ರವಿಕುಮಾರ್ ಹಾಜರಿದ್ದರು.