Advertisement
ಒಬ್ಬ ಶ್ರೇಷ್ಠ ಎಂಜಿನಿಯರ್ ಎಂದಾಗ ನಮಗೆ ಮೊದಲಿಗೆ ನೆನಪಿಗೆ ಬರುವಂತಹದ್ದೇ ಸರ್. ಎಂ. ವಿಶ್ವೇಶ್ವರಯ್ಯನವರು. ಆಧುನಿಕ ಮೈಸೂರಿನ ಪಿತಾಹಮ ಎಂದು ಕರೆಯಲ್ಪಡುವ ಇವರು ಒಬ್ಬ ಎಂಜಿನಿಯರ್ ಆಗಿ ರಾಷ್ಟ್ರ ನಿರ್ಮಾಣದ ಅಭಿವೃದ್ಧಿಯ ಕಾರ್ಯದಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.
Related Articles
Advertisement
ಭಾರತದ ಪ್ರಮುಖ ಅಣೆಕಟ್ಟುಗಳು, ಜಲಾಶಯಗಳು ಮತ್ತು ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಪಾತ್ರ ಮಹತ್ವದ್ದಾಗಿದೆ. ಮುಖ್ಯ ಎಂಜಿನಿಯರ್ ಆಗಿ ಅವರು ಹೈದ್ರಾಬಾದ್‌ನಲ್ಲಿ ಪ್ರವಾಹ ನಿಯಂತ್ರಣ ವ್ಯವಸ್ಥೆ ಮತ್ತು ಮೈಸೂರಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟುಗಳಂತಹ ಹಲವಾರು ಜನ-ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೂ ಮೈಸೂರು ಸೋಪ್ ಫ್ಯಾಕ್ಟರಿ, ಉಕ್ಕಿನ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೇಶಕ್ಕಾಗಿ ಇವರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 1955ರಲ್ಲಿ ಭಾರತ ಸರಕಾರವು ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಹೀಗೆ ರಾಷ್ಟ್ರ ನಿರ್ಮಾಣದ ಅಭಿವೃದ್ಧಿಯ ಕಾರ್ಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಶ್ಲಾಘಿಸಲು, 1968ರಲ್ಲಿ ಭಾರತ ಸರಕಾರವು ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟೆಂಬರ್15 ರಂದು ರಾಷ್ಟ್ರೀಯ ಎಂಜಿನಿಯರ್ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ, ಇಂದಿನವರೆಗೂ ಪ್ರತಿವರ್ಷ ನಮ್ಮ ದೇಶದ ಅಭಿವೃದ್ಧಿಯ ಕಾರ್ಯದಲ್ಲಿ ಪ್ರತಿಯೊಬ್ಬ ಎಂಜಿನಿಯರ್‌ಗಳ ಕೊಡುಗೆಯನ್ನು ಗೌರವಿಸಲು ಎಂಜಿನಿಯರ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಎಂಜಿನಿಯರ್ ದಿನದ ಆಚರಣೆಯ ಉದ್ದೇಶ ಮತ್ತು ಮಹತ್ವ:
ನಮ್ಮ ಸಮಾಜದ ಅಭಿವೃದ್ಧಿಯ ಕಾರ್ಯದಲ್ಲಿ ಎಂಜಿನಿಯರ್‌ಗಳ ಪಾತ್ರ ಬಹು ಮುಖ್ಯವಾದದ್ದು. ರಸ್ತೆಗಳು, ಸೇತುವೆಗಳಿಂದ ಹಿಡಿದು ಕಟ್ಟಡಗಳು ಮತ್ತು ವಿವಿಧ ರೀತಿಯ ಯಂತ್ರಗಳನ್ನು ರೂಪಿಸುವವರೆಗೆ ನಾವು ಅವಲಂಬಿಸಿರುವ ಪ್ರತಿಯೊಂದು ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಮಾನವನ ಜೀವನಕ್ರಮವನ್ನು ಸಡಿಲಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಜನಜೀವನವನ್ನು ಗುಣಮಟ್ಟಕ್ಕೆ ತರುವಲ್ಲಿ ಮಹತ್ವವುಳ್ಳ ಜನಕರಾಗಿದ್ದಾರೆ .ಇಂತಹ ಎಂಜಿನಿಯರ್‌ಗಳನ್ನು ಮತ್ತು ಅವರ ಕೊಡುಗೆಯನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ಎಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.
ಭಾರತವು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಎಂಜಿನಿಯರ್ ಗಳನ್ನು ಹೊಂದಿರುವ ದೇಶವಾಗಿದೆ. ಇದಷ್ಟೇ ಅಲ್ಲದೆ, ಎಂಜಿನಿಯರಿಂಗ್ ಮತ್ತು ಐಟಿ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಎಂಜಿನಿಯರ್ ಗಳಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ. ವಿಶೇಷವಾಗಿ ಯುವಜನತೆ ಮುಂದಿನ ದಿನಗಳಲ್ಲಿ ಈ ಕಾರ್ಯಕ್ಷೇತ್ರಕ್ಕೆ ಮುಂಬರಲು ಮತ್ತು ದೇಶದ ಅಭಿವೃದ್ಧಿ ಕಾರ್ಯಕ್ಕೆ ಕೊಡುಗೆಯನ್ನು ನೀಡಲು ಪ್ರೇರೇಪಿಸುತ್ತದೆ.
-ವೀಕ್ಷಿತಾ ವಿ. ಆಳ್ವಾಸ್ ಕಾಲೇಜು
ಮೂಡುಬಿದಿರೆ