Advertisement

ನೂರೈವತ್ತರ ಗಡಿ ದಾಟಿದ ಜೋ ರೂಟ್‌

01:02 AM Aug 15, 2021 | Team Udayavani |

ಲಂಡನ್‌: ನಾಯಕ ಜೋ ರೂಟ್‌ ಅವರ ಮತ್ತೂಂದು ಸೊಗಸಾದ ಹಾಗೂ ಅಷ್ಟೇ ಜವಾಬ್ದಾರಿಯುತ ಶತಕ ಸಾಹಸದಿಂದ ಇಂಗ್ಲೆಂಡ್‌ ತಂಡ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಮೊತ್ತವನ್ನು ಮೀರಿಸುವ ಹಾದಿ ಹಿಡಿದಿದೆ. ಟೀಮ್‌ ಇಂಡಿಯಾದ 364ಕ್ಕೆ ಉತ್ತರವಾಗಿ 8 ವಿಕೆಟಿಗೆ 360 ರನ್‌ ಗಳಿಸಿ ದಿನದಾಟ ಮುಂದುವರಿಸುತ್ತಿದೆ.

Advertisement

ನಾಟಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಸೇರಿದಂತೆ ಒಟ್ಟು 173 ರನ್‌ ಪೇರಿಸಿದ್ದ ರೂಟ್‌, ಲಾರ್ಡ್ಸ್‌ನಲ್ಲೂ ಇದೇ ಬ್ಯಾಟಿಂಗ್‌ ವೈಭವವನ್ನು ಮುಂದುವರಿಸಿದರು. ನೂರೈವತ್ತರ ಗಡಿ ದಾಟಿ ಮೆರೆದರು. ಲಾರ್ಡ್ಸ್‌ನಲ್ಲಿ ಅತ್ಯಧಿಕ 4 ಸಲ 150 ರನ್‌ ಬಾರಿಸಿದ ದಾಖಲೆಯನ್ನೂ ರೂಟ್‌ ಒಲಿಸಿಕೊಂಡರು.

ರೂಟ್‌ 160 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 298 ಎಸೆತಗಳ ಈ ಕಪ್ತಾನನ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಒಳಗೊಂಡಿದೆ.

ಮೊದಲ ಅವಧಿಯಲ್ಲಿ ಭಾರತಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ. ಆಗ ಇಂಗ್ಲೆಂಡ್‌ 3 ವಿಕೆಟಿಗೆ 216 ರನ್‌ ಗಳಿಸಿತ್ತು. ದ್ವಿತೀಯ ಅವಧಿಯ ಆಟದಲ್ಲಿ ಭಾರತ 2 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಯಿತಾದರೂ ರೂಟ್‌ ಮಾತ್ರ ಆಳವಾಗಿ ಬೇರುಬಿಟ್ಟು ನಿಂತಿದ್ದರು.

ಮುಂಜಾನೆಯ ಸಂಪೂರ್ಣ ಅವಧಿಯನ್ನು ರೂಟ್‌-ಬೇರ್‌ಸ್ಟೊ ತಮ್ಮ ಬ್ಯಾಟಿಂಗಿಗೆ ಮೀಸಲಿರಿಸಿದರು. ಈ ಜೋಡಿಯಿಂದ 4 ವಿಕೆಟಿಗೆ 121 ರನ್‌ ಒಟ್ಟುಗೂಡಿತು. ಲಂಚ್‌ ಬಳಿಕ ಸಿರಾಜ್‌ ಈ ಜೋಡಿಯನ್ನು ಬೇರ್ಪಡಿಸಿದರು. 57 ರನ್‌ ಮಾಡಿದ ಬೇರ್‌ಸ್ಟೊ ಭಾರತೀಯ ಕಪ್ತಾನನ ಕೈಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

Advertisement

ಅನಂತರ ಬಂದ ಜಾಸ್‌ ಬಟ್ಲರ್‌ (23) ನಾಯಕನೊಂದಿಗೆ 54 ರನ್‌ ಜತೆಯಾಟ ನಿಭಾಯಿಸಿದರು.  ಮೊಹ ಮ್ಮದ್‌ ಸಿರಾಜ್‌ 4, ಇಶಾಂತ್‌ ಶರ್ಮ 3 ವಿಕೆಟ್‌ ಉರುಳಿಸಿದರು.

ರೂಟ್‌ ಸತತ ಶತಕ  :

ಜೋ ರೂಟ್‌ ಮೊದಲ ಸಲ ಸತತ ಎರಡು ಟೆಸ್ಟ್‌ಗಳಲ್ಲಿ ಶತಕ ಬಾರಿಸಿದರು. ಮೊದಲ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಅವರು 109 ರನ್‌ ಮಾಡಿದ್ದರು. 2013ರ ಆ್ಯಶಸ್‌ ಸರಣಿ ಬಳಿಕ ಇಂಗ್ಲೆಂಡ್‌ ಆಟಗಾರನಿಂದ ದಾಖಲಾದ ಸತತ ಶತಕಗಳ ದಾಖಲೆ ಇದಾಗಿದೆ. ಅಂದಿನ ಸಾಧಕ ಇಯಾನ್‌ ಬೆಲ್‌.

ಈ ಸಾಧನೆಯ ವೇಳೆ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಪೂರ್ತಿಗೊಳಿಸಿದ ಇಂಗ್ಲೆಂಡಿನ ಎರಡನೇ ಬ್ಯಾಟ್ಸ್‌ಮನ್‌ ಎನಿಸಿದರು. ಅಲಸ್ಟೇರ್‌ ಕುಕ್‌ ಮೊದಲಿಗ. ಅತೀ ಕಡಿಮೆ 3,167 ದಿನಗಳಲ್ಲಿ 9 ಸಾವಿರ ರನ್‌ ಪೂರೈಸಿದ ದಾಖಲೆಯೂ ರೂಟ್‌ ಪಾಲಾಯಿತು. ಅಲಸ್ಟೇರ್‌ ಕುಕ್‌ ದಾಖಲೆ ಪತನಗೊಂಡಿತು (3,380 ದಿನ).

ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ 5 ಶತಕ ಬಾರಿಸಿದ ಇಂಗ್ಲೆಂಡ್‌ ನಾಯಕನೆಂಬ ಹಿರಿಮೆಗೂ ರೂಟ್‌ ಭಾಜನರಾದರು. ಗ್ರಹಾಂ ಗೂಚ್‌ (1990), ಮೈಕಲ್‌ ಆಥರ್ಟನ್‌ (1999) ಮತ್ತು ಆ್ಯಂಡ್ರೂé ಸ್ಟ್ರಾಸ್‌ (2009) ತಲಾ 4 ಶತಕ ಬಾರಿಸಿದ್ದರು.

ಇದು ರೂಟ್‌ ಅವರ 22ನೇ ಟೆಸ್ಟ್‌ ಶತಕ. ಇಂಗ್ಲೆಂಡಿನ ಸರ್ವಾಧಿಕ ಶತಕ ಸಾಧಕರ ಯಾದಿಯಲ್ಲಿ ಅವರಿಗೆ ಜಂಟಿ 3ನೇ ಸ್ಥಾನ. ವಾಲೀ ಹ್ಯಾಮಂಡ್‌, ಕಾಲಿನ್‌ ಕೌಡ್ರಿ, ಜೆಫ್ ಬಾಯ್ಕಟ್‌ ಮತ್ತು ಇಯಾನ್‌ ಬೆಲ್‌ ಕೂಡ ಇದೇ ಸಾಲಿನಲ್ಲಿದ್ದಾರೆ. ಕುಕ್‌ (33) ಮತ್ತು ಕೆವಿನ್‌ ಪೀಟರ್‌ಸನ್‌ (23) ಮೊದಲೆರಡು ಸ್ಥಾನದಲ್ಲಿದ್ದಾರೆ.

ಕಾರ್ಕ್‌ ಎಸೆದ ವೀಕ್ಷಕರು  :

ತೃತೀಯ ದಿನದಾಟದ ಮೊದಲ ಅವಧಿಯಲ್ಲಿ ಪ್ರೇಕ್ಷಕರ ಒಂದು ವರ್ಗ ಶಾಂಪೇನ್‌ ಬಾಟಲಿಯ ಕಾರ್ಕ್‌ಗಳನ್ನು ಅಂಗಳಕ್ಕೆಸೆದ ಘಟನೆ ನಡೆದಿದೆ. ಬೌಂಡರಿ ಲೈನ್‌ ಬಳಿ ಫೀಲ್ಡಿಂಗ್‌ ನಡೆಸುತ್ತಿದ್ದ ಕೆ.ಎಲ್‌. ರಾಹುಲ್‌ ಅವರನ್ನು ಟಾರ್ಗೆಟ್‌ ಮಾಡಿದಂತಿತ್ತು. ಅದನ್ನು ಹೊರಗೆಸೆಯುವಂತೆ ಕೊಹ್ಲಿ ಸೂಚಿಸಿದರು. ಬಳಿಕ ಇದನ್ನು ಅಂಪಾಯರ್‌ಗಳ ಗಮನಕ್ಕೆ ತರಲಾಯಿತು. ಹೀಗಾಗಿ ಆಟ ಸ್ವಲ್ಪ ಹೊತ್ತು ಸ್ಥಗಿತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next