Advertisement

ಕನಿಷ್ಠ ವೇತನಕ್ಕಾಗಿ ಒತ್ತಾಯ:ಅಂಚೆ ನೌಕರರಿಂದ ಪ್ರತಿಭಟನೆ

02:40 PM Mar 18, 2017 | |

ಮಡಿಕೇರಿ: ಕನಿಷ್ಠ ವೇತನದ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖೀಲ ಭಾರತೀಯ ಅಂಚೆ ಇಲಾಖಾ ನೌಕರರ ಸಂಘ ಮತ್ತು ನ್ಯಾಷನಲ್‌ ಯೂನಿಯನ್‌ ಫಾರ್‌ ಪೋಸ್ಟಲ್‌ ಅಂಪ್ಲಾಯಿಸ್‌ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಇದರಿಂದ ಜಿಲ್ಲೆಯ ಬಹುತೇಕ ಅಂಚೆ ಕಚೇರಿಗಳ ಕಾರ್ಯ ಸ್ಥಗಿತಗೊಂಡಿತ್ತು.

Advertisement

ಅಖೀಲ ಭಾರತೀಯ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷರಾದ ಜಮುನ, ನ್ಯಾಷನಲ್‌ ಯೂನಿಯನ್‌ ಫಾರ್‌ ಪೋಸ್ಟಲ್‌ ಎಂಪ್ಲಾಯಿಸ್‌ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಬಿ. ಗಣೇಶ್‌ ಅವರ ನೇತೃತ್ವದಲ್ಲಿ ನೂರಾರು ಅಂಚೆ ಇಲಾಖಾ ನೌಕರರು ನಗರದ ಜಿಲ್ಲಾ ಅಂಚೆ ಇಲಾಖಾ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ 24 ಅಂಚೆ ಇಲಾಖೆಗಳಲ್ಲಿನ ಕಾರ್ಯಚಟುವ‌ಟಿಕೆ ಸ್ಥಗಿತಗೊಂಡಿತ್ತು.

ಪ್ರತಿಭಟನೆಯ ಮೂಲಕ ಪ್ರಮುಖವಾಗಿ ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯು 7ನೇ ವೇತನ ಆಯೋಗದ ವರದಿಯಲ್ಲಿನ ನ್ಯೂನತೆಗಳ ಪುನರ್‌ ಪರಿಶೀಲನೆಗಾಗಿ ಕೇಂದ್ರ ಸಂಪುಟ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಬೇಡಿಕೆಗಳನ್ನು ಇತ್ಯರ್ಥಗೊಳಿಸಬೇಕೆಂದು, ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಗೆ ಕೇಂದ್ರದ ಮಂತ್ರಿಗಳು ನೀಡಿದ ಆಶ್ವಾಸನೆಗಳನ್ನು ಅದರಲ್ಲು ಕನಿಷ್ಠ ವೇತನದಲ್ಲಿ ಹೆಚ್ಚಳ ಹಾಗೂ ಫಿಟ್‌ಮೆಂಟ್‌ ಸೂತ್ರಗಳನ್ನು ಜಾರಿಗೊಳಿಸಬೇಕೆಂದು ಆಗ್ರ‌ಹಿಸಲಾಗಿದೆ.

ಮನೆಬಾಡಿಗೆ ಭತ್ಯೆಯನ್ನು ಹಾಲಿ ಇರುವಂತೆ ಉಳಿಸಿಕೊಂಡು  ಸಂಚಾರ ಭತ್ಯೆಯನ್ನು ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿಯ ಬೇಡಿಕೆಯಂತೆ ಹೆಚ್ಚಿಸುವುದು ಹಾಗೂ 7ನೇ ವೇತನ ಆಯೋಗದ ಶಿಫಾರಸಿನಿಂದ ಉಂಟಾ ಗಿರುವ ಎಲ್ಲಾ ರೀತಿಯ ತಾರತಮ್ಯಗಳನ್ನು ಸಮಯ ಪರಿಮಿತಿಯೊಳಗೆ ಬಗೆಹರಿಸಬೇಕು, ಪಿಎಫ್ಆರ್‌ಡಿಎ ಕಾಯ್ದೆ ಮತ್ತು ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಕೇಂದ್ರ ನೌಕರರಿಗೂ ಒಂದೇ ರೀತಿಯ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನೀಡಬೇಕು, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರಂತೆ ಪರಿಗಣಿಸಿ ವೇತನ ಹಾಗೂ ಎಲ್ಲಾ ಭತ್ಯೆಗಳನ್ನು ನೀಡುವುದು, ದಿನಗೂಲಿ, ಗುತ್ತಿಗೆ, ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next