Advertisement

ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ: ಖರ್ಗೆ

11:20 PM May 02, 2023 | Team Udayavani |

ಬೆಂಗಳೂರು: ನಾವು ನೀಡಿದ ಎಲ್ಲ ಭರವಸೆಗಳ ಈಡೇರಿಕೆ ಬದ್ಧತೆ ಮತ್ತು ಆದ್ಯತೆಯಾಗಿದ್ದು, ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿಗಳನ್ನು ಮಂಜೂರು ಮಾಡುವಂತೆ ಹೇಳುತ್ತೇನೆ. ಇದು ನನ್ನ “ಗ್ಯಾರಂಟಿ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಉಳಿದವರಂತೆ ಓಲೈಕೆ ಮಾತುಗಳನ್ನು ಹೇಳಿ ಹೋಗುವವರಲ್ಲ; ಈ ಹಿಂದೆ ನಾವು ಅಧಿಕಾರಕ್ಕೆ ಬಂದಾಗ 165 ಭರವಸೆಗಳನ್ನು ನೀಡಿದ್ದೆವು. ಅದರಲ್ಲಿ 158 ಈಡೇರಿಸಿದ್ದೇವೆ. ಆದರೆ, ಬಿಜೆಪಿ 600 ಭರವಸೆಗಳನ್ನು ನೀಡಿ, 55 ಮಾತ್ರ ಈಡೇರಿಸಿದೆ. ಈ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳನ್ನು ಅನುಮೋದಿಸಲು ಹೇಳುತ್ತೇನೆ. ಇದಕ್ಕೆ ನಾನೇ ಗ್ಯಾರಂಟಿ ಎಂದು ಹೇಳಿದರು.
ನನಗೆ ಕೆಲವು ಪತ್ರಗಳು ಮತ್ತು ಕರೆಗಳು ಕೂಡ ಬಂದಿದ್ದು, ಅದರಲ್ಲಿ ಪಕ್ಷದ ಗ್ಯಾರಂಟಿಗಳ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಆ ಗ್ಯಾರಂಟಿಗಳ ಬಗ್ಗೆ ಇನ್ನಷ್ಟು ಪ್ರಚಾರದ ಆವಶ್ಯಕತೆ ಇರುವುದಾಗಿ ಹೇಳಿದ್ದಾರೆ. ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕು ಎಂದರು.

ಮತ ಗಳಿಕೆ ಸಾಧನವಲ್ಲ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಣಾಳಿಕೆ ಎನ್ನುವುದು ಮತ ಗಳಿಕೆ ಸಾಧನವಲ್ಲ; ರಾಜ್ಯದ ವಿಕಾಸಕ್ಕೆ, ಜನರ ಆರ್ಥಿಕ- ಸಾಮಾಜಿಕ ಬದಲಾವಣೆಯ ಸಾಧನವಾಗಿದೆ. ಭರವಸೆ ಕೊಟ್ಟ ಮೇಲೆ ಈಡೇರಿಸುವ ಕೆಲಸ ಆಯಾ ಪಕ್ಷಗಳು ಮಾಡಬೇಕು. ಬಿಜೆಪಿಗೆ ಈ ಬದ್ಧತೆ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next