Advertisement

ವಾಡಿಯಲ್ಲಿ 144 ನಿಷೇಧಾಜ್ಞೆ ಜಾರಿ

10:40 AM Jan 23, 2024 | Team Udayavani |

ವಾಡಿ: ಅಯೋಧ್ಯ ರಾಮ ಮಂದಿರ ಉದ್ಘಾಟನೆಯ ಸಂಭ್ರಮಾಚರಣೆ ವೇಳೆ ಸಂಭವಿಸಿದ ಗಲಾಟೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Advertisement

ಚಿತ್ತಾಪುರ ತಹಶೀಲ್ದಾರ್ ಸೈಯದ್ ಷಾಷಾವಲಿ ಅವರು ಈ ಆದೇಶ ಹೊರಡಿಸಿದ್ದಾರೆ. ಸೋಮವಾರ ನಡೆಸಲಾದ ಶ್ರೀರಾಮ ಮೂರ್ತಿ ಮೆರವಣಿಗೆ ವೇಳೆ ಗಲಾಟೆಯಾಗಿದೆ. ಪರಿಣಾಮ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಜ.25ರ ಬೆಳಗ್ಗೆ 6:00 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧದ ಅಂಗಡಿ  ಹೊರತುಪಡಿಸಿ ಇತರ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮತ್ತು ನಾಲ್ಕಕ್ಕಿಂತ ಹೆಚ್ಚು ಜನರು ಗುಂಪು ಗುಂಪಾಗಿ ಸಂಚರಿಸುವಂತಿಲ್ಲ ಎಂದು ಸೂಚಿಸಿದ್ದಾರೆ.

ನಿಷೇಧಾಜ್ಞೆ ಏಕೆ: ಸೋಮವಾರ ನಡೆದ ರಾಮ ಮೂರ್ತಿ ಮೆರವಣಿಗೆ  ಸಂಜೆ ಬಸ್ ನಿಲ್ದಾಣ ಸಮೀಪಿಸಿದಾಗ ಹತ್ತಿರದಲ್ಲಿ ಮಾಂಸ ಮಾರಾಟ ಅಂಗಡಿ ತೆರೆದಿದ್ದನ್ನು ಗಮನಿಸಿ ಕಲ್ಲು ತೂರಲಾಗಿತ್ತು. ಇದು ಅಂಗಡಿಯಲ್ಲಿದ್ದ ಯುವಕನಿಗೆ ಬಡಿದು ಗಾಯಗೊಂಡಿದ್ದು, ಪರಸ್ಪರ ವಾಗ್ವಾದಕ್ಕೆ ಕಾರಣವಾಗಿ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

ಈ ವೇಳೆ ಕೆಲವರು  ಮೋದಿ ಪರ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ  ಘೋಷಣೆ ಕೂಗಿದ ಪ್ರಸಂಗ ನಡೆಯಿತು.ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಪೊಲೀಸರು ಹೈ ಹೈ ಅಲರ್ಟ್ ಘೋಷಿಸಿದರು.

Advertisement

ಸದ್ಯ ವಾಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಕೆಲ ಖಾಸಗಿ ಶಾಲೆಗಳು ಸ್ವಯಂ ರಜೆ ಘೋಷಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next