Advertisement

Tamil Nadu: 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಬಂಧನ

11:45 AM Dec 02, 2023 | Team Udayavani |

ಚೆನ್ನೈ: ಸರ್ಕಾರಿ ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಯನ್ನು ತಮಿಳುನಾಡಿನ ವಿಜಿಲೆನ್ಸ್‌ ಮತ್ತು ಭ್ರಷ್ಟಾಚಾರ ನಿಗ್ರಹ ದಳ ದಿಂಡಿಗಲ್‌ ನಲ್ಲಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Uttar Pradesh: ವಿಚ್ಚೇದನದ ಬಳಿಕ ಹೃದಯಾಘಾತವಾದ ಪತಿಯನ್ನು ಮತ್ತೆ ವರಿಸಿದ ಪತ್ನಿ.!

ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ಅಂಕಿತ್‌ ತಿವಾರಿ ಎಂದು ಗುರುತಿಸಲಾಗಿದೆ. ತಿವಾರಿಗೆ ಕೋರ್ಟ್‌ ಡಿಸೆಂಬರ್‌ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ತಿವಾರಿ ಬಂಧನದ ನಂತರ ದಿಂಡಿಗಲ್‌ ಜಿಲ್ಲಾ ವಿಜಿಲೆನ್ಸ್‌ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಜಂಟಿಯಾಗಿ ಮದುರೈಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಶೋಧ ಕಾರ್ಯನಡೆಸಿರುವುದಾಗಿ ವರದಿ ವಿವರಿಸಿದೆ.

ಅಂಕಿತ್‌ ತಿವಾರಿ ಮನೆಯಲ್ಲಿಯೂ ಶೋಧ ಕಾರ್ಯ ನಡೆಸಲಾಗಿದೆ. ಈ ಪ್ರಕರಣದಲ್ಲಿ ಮದುರೈ ಮತ್ತು ಚೆನ್ನೈನ ಹಲವು ಅಧಿಕಾರಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಮೂಲಗಳು ಹೇಳಿವೆ.

ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್‌ ತಿವಾರಿ ಹಲವಾರು ಜನರಿಗೆ ಬ್ಲ್ಯಾಕ್‌ ಮೇಲ್‌ ಮಾಡಿರುವ ಆರೋಪಗಳಿವೆ. ತಿವಾರಿ ಪಡೆದ ಲಂಚದ ಹಣ ಇತರ ಇ.ಡಿ. ಅಧಿಕಾರಿಗಳಿಗೂ ಹಂಚುತ್ತಿದ್ದ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಏನಿದು ಪ್ರಕರಣ:

ದಿಂಡಿಗಲ್‌ ನ ಸರ್ಕಾರಿ ನೌಕರರನ ವಿರುದ್ಧ ಜಿಲ್ಲಾ ವಿಜಿಲೆನ್ಸ್‌ & ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿದ್ದು, ಅದು ಕ್ಲೋಸ್‌ ಆಗಿತ್ತು. ಆದರೆ ಅಕ್ಟೋಬರ್‌ 29ರಂದು ಅಂಕಿತ್‌ ತಿವಾರಿ ನೌಕರನನ್ನು ಸಂಪರ್ಕಿಸಿ, ನಿಮ್ಮ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಇ.ಡಿ. ತನಿಖೆ ನಡೆಸಬೇಕೆಂದು ಪ್ರಧಾನ ಮಂತ್ರಿ ಕಚೇರಿಯಿಂದ ಆದೇಶ ಬಂದಿದೆ ಎಂದು ತಿಳಿಸಿದ್ದ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 30ರಂದು ಮದುರೈಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗುವಂತೆ ತಿವಾರಿ ತಿಳಿಸಿದ್ದ. ನಿಗದಿತ ದಿನಾಂಕದಂದು ಸರ್ಕಾರಿ ನೌಕರ ಮದುರೈನ ಇ.ಡಿ. ಕಚೇರಿಗೆ ಹೋದಾಗ, ತನಿಖೆಯನ್ನು ಕ್ಲೋಸ್‌ ಮಾಡಲು 3 ಕೋಟಿ ರೂಪಾಯಿ ಲಂಚ ನೀಡಬೇಕೆಂದು ತಿವಾರಿ ಬೇಡಿಕೆ ಇಟ್ಟಿದ್ದ ಎಂದು ವರದಿ ವಿವರಿಸಿದೆ.

ಬಳಿಕ ತಾನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅವರು 51 ಲಕ್ಷ ರೂಪಾಯಿ ನೀಡುವಂತೆ ತಿಳಿಸಿರುವುದಾಗಿ ತಿವಾರಿ ಉದ್ಯೋಗಿಗೆ ಹೇಳಿದ್ದ.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಇ.ಡಿ. ಅಧಿಕಾರಿ:

ಮಾತುಕತೆಯಂತೆ ನವೆಂಬರ್‌ 1ರಂದು ನೌಕರ ಮೊದಲ ಕಂತಿನ 20 ಲಕ್ಷ ರೂಪಾಯಿ ಲಂಚವನ್ನು ಅಂಕಿತ್‌ ತಿವಾರಿಗೆ ನೀಡಿದ್ದ. ಈ ಸಂದರ್ಭದಲ್ಲಿ ತಿವಾರಿ ಪೂರ್ಣ ಹಣವನ್ನು ಪಾವತಿಸಬೇಕು, ಒಂದು ವೇಳೆ ಹಣ ಕೊಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನೌಕರನಿಗೆ ಬೆದರಿಕೆ ಹಾಕಿದ್ದ. ಆಗ ಸಂಶಯಗೊಂಡ ನೌಕರ ನವೆಂಬರ್‌ 30ರಂದು ದಿಂಡಿಗಲ್‌ ನ ಡಿವಿಎಸಿ ಅಧಿಕಾರಿಗಳಲ್ಲಿ ದೂರು ದಾಖಲಿಸಿದ್ದ.

ಅದರಂತೆ ಡಿಸೆಂಬರ್‌ 1ರಂದು ಸರ್ಕಾರಿ ನೌಕರನಿಂದ ಎರಡನೇ ಕಂತಿನ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಅಂಕಿತ್‌ ತಿವಾರಿ ಜಿಲ್ಲಾ ವಿಜಿಲೆನ್ಸ್‌ & ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next