ನವದೆಹಲಿ: ಬಹುಕೋಟಿ ಬ್ಯಾಂಕ್ ಸಾಲದ ವಂಚನೆಗೆ ಸಂಬಂಧಿಸಿದ ಹಣಕಾಸು ದುರುಪಯೋಗ ಪ್ರಕರಣದಲ್ಲಿ ದೆಹಲಿ ಮೂಲದ ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆವಾಲ್ ಕ್ರಿಶನ್ ಕುಮಾರ್ ಎಂಬಾತನನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ.)ಸೋಮವಾರ (ಜುಲೈ 05) ತಿಳಿಸಿದೆ.
ಇದನ್ನೂ ಓದಿ:ಮೇಕೆದಾಟು ಯೋಜನೆ : ಯಡಿಯೂರಪ್ಪ ಸ್ಟಾಲಿನ್ ಗೆ ಪತ್ರ ಬರೆದಿದ್ದೇ ತಪ್ಪು : ಸಿದ್ದರಾಮಯ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಕುಮಾರ್ ಅವರನ್ನು ಬಂಧಿಸಿದ್ದು, ಪಿಎಂಎಲ್ ಎ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಂತರ ಜುಲೈ 9ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿರುವುದಾಗಿ ಕೇಂದ್ರ ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ ದೆಹಲಿ ಮತ್ತು ಹರ್ಯಾಣದ ಸುಮಾರು ಒಂಬತ್ತು ಸ್ಥಳಗಳ ಮೇಲೆ ದಾಳಿ ನಡೆಸಿ, ದೋಷಾರೋಪಕ್ಕೆ ಸಂಬಂಧಿಸಿದ ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ವಿವರಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳ ಒಕ್ಕೂಟದ ಹತ್ತು ಬ್ಯಾಂಕ್ ಗಳಲ್ಲಿ 3,269 ಕೋಟಿ ರೂಪಾಯಿಗಳ ಸಾಲವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಎಫ್ ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಪಿಎಂಎಲ್ ಎ ಕಾಯ್ದೆಯಡಿ ದೂರು ದಾಖಲಿಸಿರುವುದಾಗಿ ತಿಳಿಸಿದೆ.
ಶಕ್ತಿ ಭೋಗ್ ಕಂಪನಿಯ ಸಾಲದ ವಂಚನೆ ವಿರುದ್ಧ ಎಸ್ ಬಿಐ ಸಿಬಿಐಗೆ ದೂರು ನೀಡಿತ್ತು. ಎಸ್ ಬಿಐ ನೀಡಿದ ದೂರಿನ ಪ್ರಕಾರ, ಬ್ಯಾಂಕ್ ನಿರ್ದೇಶಕರು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಿತ್ತು.