Advertisement

ಪ್ಲಾಸ್ಟಿಕ್‌ ತ್ಯಾಜ್ಯದಲ್ಲಿ ಇಂಧನ ಶಕ್ತಿ

11:07 AM Nov 15, 2019 | Suhan S |

ಹುಬ್ಬಳ್ಳಿ: ಹತ್ತಾರು ವರ್ಷಗಳು ಗತಿಸಿದರೂ ಕರಗದ ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯೋಗಾರ್ಥ ಪಾಲಿಕೆ ಕೈಗೊಂಡ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಅ. 2ರಂದು ಗಾಂಧಿ ಜಯಂತಿಯಂದು ಅವಳಿ ನಗರದಲ್ಲಿ ಸಂಗ್ರಹಿಸಲಾದ 6 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಾಗಲಕೋಟೆಯ ಜೆ.ಕೆ.ಸಿಮೆಂಟ್‌ ಕಾರ್ಖಾನೆ ಸಂಗ್ರಹಿಸಿಕೊಂಡು ಇಂಧನವಾಗಿ ಬಳಸಿಕೊಂಡಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯನ್ವಯ ರಾಜ್ಯ ಸರಕಾರ ಗಾಂಧಿ ಜಯಂತಿಯಂದು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಲು ಸ್ಥಳಿಯ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಮಹಾನಗರ ಪಾಲಿಕೆ ಕೈಗೊಂಡ ಅಭಿಯಾನಕ್ಕೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಹಲವು ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳು ಸಕ್ರಿಯವಾಗಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹದಲ್ಲಿ ತೊಡಗಿದ್ದವು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸಂಗ್ರಹಿಸಿದ್ದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಾರವಾರ ರಸ್ತೆಯ ಹೇಸಿಮಡ್ಡಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪ್ರತ್ಯೇಕವಾಗಿ ಸುರಿಯಲಾಗಿತ್ತು.

ಸಿಮೆಂಟ್‌ ಫ್ಯಾಕ್ಟರಿಗೆ ಯಾಕೆ?: ಸಿಮೆಂಟ್‌ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಂಧನದ ಬಳಕೆಯಾಗುತ್ತದೆ. ಕಲ್ಲಿದ್ದಲಿನೊಂದಿಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಇಂಧನವಾಗಿ ಬಳಸುವುದರಿಂದ ಕಲ್ಲಿದ್ದಲು ಉಳಿಸಲು ಸಾಧ್ಯವಾಗಿದೆ. ಕಲ್ಲಿದ್ದಲಿನೊಂದಿಗೆ ಪ್ಲಾಸ್ಟಿಕ್‌ ತ್ಯಾಜ್ಯ ದಹಿಸಬಹುದಾಗಿದೆ. ಸಿಮೆಂಟ್‌ ಕಾರ್ಖಾನೆಗಳಲ್ಲಿ ಹೊಗೆ ಹೋಗುವ ಚಿಮಣಿಗಳಲ್ಲಿ ಇಲೆಕ್ಟ್ರೋಸ್ಟಾಟಿಕ್‌ ಪ್ರಿಸಿಪೇಟರ್‌ ಕಡ್ಡಾಯವಾಗಿರುತ್ತದೆ. ಇದು ಪರಿಸರ ಮಾಲಿನ್ಯ ಮಾಡುವ ವಿಷಕಾರಕ ಅನಿಲಗಳನ್ನು ಸಂಗ್ರಹಿಸಿಟ್ಟುಕೊಂಡು, ಪರಿಸರಕ್ಕೆ ಮಾಲಿನ್ಯ ಉಂಟು ಮಾಡದ ಹೊಗೆಯನ್ನು ಮಾತ್ರ ಚಿಮಣಿ ಮೂಲಕ ಹೊರಗೆ ಬಿಡುತ್ತದೆ.

ಇದರಿಂದ ಪರಿಸರಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ನಿಷೇಧಿಸಿದ್ದರೂ ಪ್ಲಾಸ್ಟಿಕ್‌ ಮಾರಿ ದೊಡ್ಡ ತಲೆನೋವಾಗಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉಚಿತವಾಗಿ ನೀಡಲು ಸಿದ್ಧವಾಗಿದೆ. ಆದರೆ ಸಿಮೆಂಟ್‌ ಫ್ಯಾಕ್ಟರಿಗಳು ಸಾಗಾಣಿಕೆಯ ಕಾರಣದಿಂದ ಪ್ಲಾಸ್ಟಿಕ್‌ ತ್ಯಾಜ್ಯ ತೆಗೆದುಕೊಂಡು ಹೋಗಲು ನಿರಾಸಕ್ತಿ ತೋರುತ್ತಿವೆ. ಸಿಮೆಂಟ್‌ ಫ್ಯಾಕ್ಟರಿಗಳಲ್ಲಿ ಪ್ರತಿದಿನ ಒಂದು ನಿಗದಿತ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಇಂಧನವಾಗಿ ಬಳಸಿದರೆ ಸಮಸ್ಯೆ ಸ್ವಲ್ಪ ಮಟ್ಟಿಗ ನಿವಾರಣೆಯಾಗಬಹುದಾಗಿದೆ. ರಸ್ತೆ ಕಾಮಗಾರಿಯಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯ ಬಳಸುವ ಚಿಂತನೆ ನಡೆದಿದೆ. ಈ ದಿಸೆಯಲ್ಲಿ ತ್ವರಿತ ಕ್ರಮ ಅಗತ್ಯವಾಗಿದೆ.

ಪ್ರತಿ ದಿನ ಅವಳಿನಗರದಲ್ಲಿ ಸುಮಾರು 2-3 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗು¤ದ್ದು, ಕಾರವಾರ ರಸ್ತೆಯ ಕಸಸಂಗ್ರಹ ಸ್ಥಳದಲ್ಲಿ ಸುರಿಯಲಾಗುತ್ತದೆ. ಅ. 2ರಂದು ಸ್ವತ್ಛತಾ ಅಭಿಯಾನ ನಿಮಿತ್ತ ಸಂಗ್ರಹಗೊಂಡ 6 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಜೆ.ಕೆ. ಸಿಮೆಂಟ್‌ ಫ್ಯಾಕ್ಟರಿಯವರಿಗೆ ಉಚಿತವಾಗಿ ತೆಗೆದುಕೊಂಡು ಹೋಗಲು ತಿಳಿಸಲಾಗಿದೆ. ಆದರೆ ಸಾಗಾಣಿಕೆ ವೆಚ್ಚ ಅಧಿಕವಾಗುವುದರಿಂದ ಫ್ಯಾಕ್ಟರಿಯವರು ಆಸಕ್ತಿ ತೋರುತ್ತಿಲ್ಲ. ಪ್ಲಾಸ್ಟಿಕ್‌ ತ್ಯಾಜ್ಯ ಯಾವ ರೀತಿ ಬಳಸುತ್ತಾರೆ ಎಂಬುದನ್ನು ಸಮರ್ಪಕವಾಗಿ ತಿಳಿಸಬೇಕು. ವಿಜಯಕುಮಾರ, ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ವಿಭಾಗದ ಕಾರ್ಯಪಾಲಕ ಅಭಿಯಂತರ

Advertisement

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next