Advertisement

ಶತ್ರುಗಳು ಒಂದಾದರೂ ಏನೂ ಮಾಡಲು ಸಾಧ್ಯವಿಲ್ಲ

01:32 PM Oct 16, 2017 | Team Udayavani |

ಮೈಸೂರು: ಮುಂದಿನ ಚುನಾವಣೆಯಲ್ಲಿ ತನ್ನನ್ನು ಸೋಲಿಸಲು ಶತ್ರುಗಳೆಲ್ಲಾ ಒಂದಾದರೂ ಏನು ಮಾಡಲು ಸಾಧ್ಯವಿಲ್ಲ. ಪ್ರತಿಪಕ್ಷದ ನಾಯಕರು ಏನೇ ತಂತ್ರ-ರಣತಂತ್ರ ಮಾಡಿದರೂ ಜನಾಭಿಪ್ರಾಯ ಬದಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾನುವಾರ ನಗರಕ್ಕಾಗಮಿಸಿದ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ  ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಸೋಲಿಸುವ ಉದ್ದೇಶದಿಂದ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ. ಆದರೆ, ತಾನು ನಾಯಕರಲ್ಲಿ ನಂಬಿಕೆ ಇಟ್ಟವನಲ್ಲ. ಬದಲಿಗೆ ಜನರಲ್ಲಿ ನಂಬಿಕೆ ಇಟ್ಟವನಾಗಿದ್ದೇನೆ. ಹೀಗಾಗಿ ಯಾವುದೇ ಶತ್ರುಗಳು ಒಂದಾದರೂ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಹಿಂದಿನ ಚಾಮುಂಡೇಶ್ವರಿ ಉಪಚುನಾವಣೆ ವೇಳೆ ಎಲ್ಲರೂ  ಒಂದಾಗಿದ್ದರೂ, ಗೆದ್ದದ್ದು ನಾನೇ.  ಅವರೆಲ್ಲಾ ಒಂದಾದರೆ ತನಗೇನೂ ಸಮಸ್ಯೆ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ಎಂದಿಗೂ ತಮ್ಮ  ಕೈ ಬಿಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶ್ರೀನಿವಾಸ್‌ ಪ್ರಸಾದ್‌ ನಂಜನಗೂಡು ಉಪ ಚುನಾವಣೆಯಲ್ಲಿ ಸೋತು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ತಾವು ಏನೂ ಮಾತನಾಡುವುದಿಲ್ಲ ಎಂದರು.

ಬಿಎಸ್‌ವೈಗೆ ಕನಿಷ್ಠ ಜ್ಞಾನವಿಲ್ಲ: ಬಿಜೆಪಿ ಲೆಕ್ಕದಲ್ಲಿ ಪರಿವರ್ತನೆ ಎಂದರೆ ಸಮಾಜದ ಪರಿವರ್ತನೆ ಅಲ್ಲ. ಬದಲಿಗೆ ಸಮಾಜ ಒಡೆಯುವುದುದೇ ಆಗಿದೆ.ಬಿಜೆಪಿ ಎಂದಿಗೂ ಮಹಿಳೆಯರು, ರೈತರ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಪಕ್ಷ ಹಾಗೂ ಆ ಪಕ್ಷದ ಮುಖಂಡರಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆಯೇ ಇಲ್ಲ ಎಂದು ವಾಗ್ಧಾಳಿ ನಡೆಸಿದರು.

ಮೈಸೂರು ಮಿನರಲ್ಸ್‌ನಲ್ಲಿನ ಹಣ ಸರ್ಕಾರದ್ದು. ತುರ್ತು ಕಾರಣಕ್ಕೆ ಅದನ್ನು ಬಳಸಿದ್ದೇವೆ. ಮುಂದಿನ ಬಜೆಟ್‌ನಲ್ಲಿ ಈ ಹಣ ವಾಪಸ್‌ ನೀಡಲಿದ್ದು, ಇದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಹಣಕಾಸು ವ್ಯವಸ್ಥೆ ಬಗ್ಗೆ ಯಡಿಯೂರಪ್ಪ ಅವರಿಗೆ ಕನಿಷ್ಠ ಜ್ಞಾನವಿಲ್ಲ.  

Advertisement

ಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದ ಅವರಿಗೆ ಈ ಬಗ್ಗೆ ಸಾಮಾನ್ಯ ಜ್ಞಾನವಿರಬೇಕಿತ್ತು. ಅವರಿಗೆ ಅದೇ ಇಲ್ಲ. ಮೈಸೂರು ಮಿನರಲ್ಸ್‌  ನಿಂದ ಸಾಲ ಮನ್ನಾದ ಹಣವನ್ನು ಅಪೆಕ್ಸ್‌ ಬ್ಯಾಂಕ್‌ಗೆ ನೀಡಿದ್ದಾರೆಂಬ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು.

ಡೋಂಗಿ ರಾಜಕೀಯ ಬೇಡ: ಮಳೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಬರಿ ತಿಂದು, ತೇಗಿ ಹೋಗಿದ್ದಾರೆ. ಆದರೆ, ಮಳೆ ವಿಷಯದಲ್ಲಿ ಕೆಲಸ ಮಾಡಿರುವುದು ನಮ್ಮ ಸರ್ಕಾರ ಮಾತ್ರ. ಬಿಜೆಪಿಯವರು ಕೇವಲ ರಸ್ತೆಯಲ್ಲಿನ ಗುಂಡಿಗಳಿಗೆ ಬಣ್ಣ ಹೊಡೆದು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಈ ರೀತಿಯ ಡೋಂಗಿ ರಾಜಕೀಯ ಬೇಡ ಎಂದು ಹೇಳಿದರು.

ತಾವು 1983ರಿಂದಲೂ ಬೆಂಗಳೂರಿನಲ್ಲಿದ್ದು, ಅಂದಿನಿಂದ ಇಂದಿನವರೆಗೂ ಈ ಪ್ರಮಾಣದ ಮಳೆ ಬಂದಿಲ್ಲ. ಆದರೆ ಮಳೆಯಿಂದಾಗಿ ಎದುರಾಗಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ಕೆಲಸ ಮಾಡಿದೆ. ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಏನು ಮಾಡಿದರು ಎಂದು ಬಿಜೆಪಿ-ಜೆಡಿಎಸ್‌ ಮುಖಂಡರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ: ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ಶಾಸಕರಿಗೆ ಚಿನ್ನದ ಬಿಸ್ಕತ್‌ ವಿಷಯ ಗೊತ್ತಿಲ್ಲ: ವಿಧಾನಸೌಧ ವಜ್ರಮಹೋತ್ಸವ ಹಿನ್ನೆಲೆ ಶಾಸಕರಿಗೆ ಚಿನ್ನದ ಬಿಸ್ಕತ್‌ಗಳನ್ನು ನೀಡುವ ವಿಚಾರದ ಬಗ್ಗೆ ತಮಗೆ ತಿಳಿದಿಲ್ಲ. ಇದನ್ನು ಸ್ಪೀಕರ್‌ ತೀರ್ಮಾನಿಸಲಿದ್ದು, ಅನುದಾನ ನೀಡುವುದನ್ನು ಸ್ಪೀಕರ್‌ರಿಂದ ಪ್ರಸ್ತಾವನೆ ಬರಬೇಕಿದೆ. ಈ ಬಗ್ಗೆ ಪ್ರಸ್ತಾವನೆ ಬಂದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ದಲಿತರನ್ನು ಮುಜರಾಯಿ ಅರ್ಚಕರಾಗಿ ನೇಮಕ ಮಾಡಲು ಸರ್ಕಾರ ಮುಕ್ತ ಮನಸ್ಸು ಹೊಂದಿದ್ದು, ಇದಕ್ಕೆ ನಮ್ಮ ವಿರೋಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.

ಕೆ.ಆರ್‌.ನಗರ ಕ್ಷೇತ್ರಕ್ಕೆ ಡಿ.ರವಿಶಂಕರ್‌ ಅಭ್ಯರ್ಥಿ: ಸಿಎಂ ಘೋಷಣೆ
ಮೈಸೂರು:
ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಡಿ.ರವಿಶಂಕರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಭಾನುವಾರ ಕೆ.ಆರ್‌.ನಗರದ ರೇಡಿಯೋ ಮೈದಾನದಲ್ಲಿ ನಡೆದ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದ ಬೂತ್‌ ಮಟ್ಟದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆ.ಆರ್‌.ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರು ಎಂಬ ವಿಷಯದಲ್ಲಿ  ಗೊಂದಲ ಮಾಡಿಕೊಳ್ಳಬೇಡಿ, ಜಿಪಂ ಸದಸ್ಯ ಡಿ.ರವಿಶಂಕರ್‌ ಅವರೇ  ನಮ್ಮ ಪಕ್ಷದ ಅಭ್ಯರ್ಥಿ, ಅವರಿಗೆ ಆರ್ಶೀವಾದ ಮಾಡಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಆತುರ ಬೇಡ: ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವು ಪುತ್ರಿ ಐಶ್ವರ್ಯಗೆ ಇನ್ನೂ ಚಿಕ್ಕ ವಯಸ್ಸು, ನಿನ್ನನ್ನೂ ರಾಜಕೀಯವಾಗಿ ಬೆಳೆಸುತ್ತೇನೆ ಆತುರ ಪಡಬೇಡ. ಈ ಬಾರಿ ರವಿಶಂಕರ್‌ ಅಭ್ಯರ್ಥಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಬಿದ ಸಭೆಯಲ್ಲೇ ಮಂಚನಹಳ್ಳಿ ಮಹದೇವು ಕುಟುಂಬದವರಿಗೆ ಕಿವಿಮಾತು ಹೇಳಿ, ಕೆ.ಆರ್‌.ನಗರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next