Advertisement

39 ವರ್ಷ ಕಳೆದರೂ ಎಂಡೋಸಲ್ಫಾನ್‌ ಸಮಸ್ಯೆ ಜೀವಂತ

12:30 AM Mar 03, 2019 | |

ಉಡುಪಿ: ಎಂಡೋಸಲ್ಫಾನ್‌ ಸಿಂಪಡಣೆ ಆಗಿ 39 ವರ್ಷ ಕಳೆದಿವೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ, ಹುಟ್ಟುವ ಮಕ್ಕಳೂ ಸೇರಿದಂತೆ ಅನೇಕ ಮಂದಿ ಇನ್ನೂ ಇದರಿಂದ ನರಳುತ್ತಿದ್ದಾರೆ ಎಂದು ಸಚಿವೆ ಡಾ| ಜಯಮಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅವರು ಶನಿವಾರ, ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂಡೋಸಲ್ಫಾನ್‌ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮಣ್ಣು ಮತ್ತು ನೀರಿನಲ್ಲಿ ಬೆರೆತಿರುವ ಎಂಡೋಸಲ್ಫಾನ್‌ ತೀವ್ರತೆ ಇನ್ನೂ ಎಷ್ಟು ವರ್ಷ ಇರಬಹುದು ಎಂಬ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ನುರಿತ ತಜ್ಞರಿಂದ ಪರಿಶೀಲನೆ ನಡೆಸಿ, ಸಂತ್ರಸ್ತರ ಸಮಸ್ಯೆಗಳನ್ನು ತಳಮಟ್ಟದಿಂದ ಬಗೆ ಹರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಎಂಡೋ ಪೀಡಿತರನ್ನು ಸರಿಯಾಗಿ ಗುರುತಿಸುವ ಕಾರ್ಯ ಆಗಿಲ್ಲ ಎಂಬ ದೂರು ಬರುತ್ತಿದ್ದು, ಎಂಡೋ ಸಿಂಪಡಣೆ ಸ್ಥಳದ ಬೀಸುವ ಗಾಳಿ ಮತ್ತು ಹರಿಯುವ ನೀರಿನಿಂದ ಸಮೀಪದ ಗ್ರಾಮಗಳಿಗೂ ಹರಡಿರುವ ಸಾಧ್ಯತೆಗಳಿವೆ. ಈ ಬಗ್ಗೆ ಎಂಡೋ ಪೀಡಿತ ಮತ್ತು ಪಕ್ಕದ ಗ್ರಾಮಗಳಲ್ಲಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಸಿ, ಅರ್ಹರನ್ನು ಗುರುತಿಸಿ ಸೌಲಭ್ಯ ವಿತರಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

ಕರಾವಳಿ ಜಿಲ್ಲೆಗಳ ಜಂಟಿ ಸಭೆ
ಉಡುಪಿ, ದ.ಕ., ಉ.ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಂಡೋ ಪೀಡಿತ ಸಂತ್ರಸ್ತರಿಗೆ ಒದಗಿಸಬೇಕಾದ ಸೌಲಭ್ಯಗಳ ಕುರಿತು 4 ಜಿಲ್ಲೆಗಳ ಜಂಟಿ ಸಭೆ ನಡೆಸುವುದಾಗಿ ತಿಳಿಸಿದ ಸಚಿವೆ, ಜಿಲ್ಲೆಯ ಎಂಡೋ ಪೀಡಿತರನ್ನು ಖುದ್ದಾಗಿ ತೆರಳಿ ವೀಕ್ಷಿಸಿ ಅವರಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ ಕೌಶಲ ತರಬೇತಿ ನೀಡಲು ಪ್ರತ್ಯೇಕ ಘಟಕ ಆರಂಭಿಸುವುದಾಗಿ ತಿಳಿಸಿದರು.

Advertisement

ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆ
ಎಂಡೋ ಪೀಡಿತರ ಶಾಶ್ವತ ಪುನರ್ವಸತಿಗಾಗಿ ನಾಡಾ ಗ್ರಾಮದ ಸೇನಾಪುರದಲ್ಲಿ 5 ಎಕ್ರೆ ಜಾಗ ಗುರುತಿಸಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಶಾಶ್ವತ ಪುನರ್ವಸತಿಗೆ ಕನಿಷ್ಠ 10 ಎಕ್ರೆ ಜಾಗ ಮೀಸಲಿಡುವಂತೆ ಮತ್ತು ದುಬೈಯಲ್ಲಿ ಅಂಗವಿಕಲರಿಗೆ ಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆ ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಚಿಕಿತ್ಸಾ ಕೇಂದ್ರ ತೆರೆಯಬೇಕು. ವಿದೇಶಗಳಲ್ಲಿನ ವೈದ್ಯರ ನೆರವು ಪಡೆದು ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅಳವಡಿಸಬೇಕು. ಕೇಂದ್ರದ ನಿರ್ಮಾಣಕ್ಕೆ ಅನುದಾನದ ಸಮಸ್ಯೆ ಇಲ್ಲ, ಶೀಘ್ರದಲ್ಲಿ ಸಮಗ್ರ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು. ಎಂಡೋ ಪೀಡಿತರಿಗೆ ನೀಡುವ ಸಾಧನ ಸಲಕರಣೆಗಳನ್ನು ವಿಕಲಚೇತನ ಇಲಾಖೆಯಿಂದ ಒದಗಿಸಲಾಗುವುದು ಎಂದರು.

ಪಿಂಚಣಿಯನ್ನು ಆರ್‌ಟಿಜಿಎಸ್‌ ಮೂಲಕ ನೀಡಲು ಕ್ರಮ ಕೈಗೊಳ್ಳಿ. ಕನಿಷ್ಠ ಪ್ರತಿ 3 ತಿಂಗಳಿಗೊಮ್ಮೆ ಸಮಿತಿಯ ಸಭೆ ಕರೆದು ಸೌಲಭ್ಯಗಳನ್ನು ವಿತರಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next