ಬೆಳ್ತಂಗಡಿ: ಎಂಡೋ ಸಂತ್ರಸ್ತರಿಗೆ ಈ ಬಜೆಟ್‌ನಲ್ಲೂ ಸರಕಾರ ಏನೂ ಕೊಟ್ಟಿಲ್ಲ; ಅಧಿವೇಶನದಲ್ಲಾದರೂ ಜನಪ್ರತಿನಿಧಿಗಳು ತಮ್ಮ ಧ್ವನಿಯಾಗುತ್ತಾರೆ ಎಂದು ಇವರು ಕಾಯುತ್ತಿದ್ದಾರೆ. ಕೇರಳ ಸರಕಾರವು ಎಂಡೋ ಸಂತ್ರಸ್ತರಿಗೆ ಪರಿಹಾರ ವಿಚಾರದಲ್ಲಿ ದಿಟ್ಟ ನಿಲುವು ತಳೆದು ಅವರ ಬಹುತೇಕ ಬೇಡಿಕೆ ಈಡೇರಿಸಿದೆ. ರಾಜ್ಯದಲ್ಲೂ ಎಂಡೋ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ ಧನ, ಪೌಷ್ಟಿಕ ಆಹಾರ ಒದಗಣೆ, ಸುಸಜ್ಜಿತ ಎಂಡೋ ಪುನರ್ವಸತಿ ಕೇಂದ್ರ ಸ್ಥಾಪನೆ, ಸಂತ್ರಸ್ತರ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಬಳಸಬೇಕೆಂಬುದು ಪ್ರಮುಖ ಬೇಡಿಕೆಗಳು. ಜಿಲ್ಲೆಯ ವಿವಿಧೆಡೆ 3,500ಕ್ಕೂ ಹೆಚ್ಚು ಎಂಡೋ ಸಂತ್ರಸ್ತರಿಗೆ ಮಾಸಾಶನ ಮಾತ್ರ ಸಿಗುತ್ತಿರುವುದು. ಇದರಲ್ಲೂ 700 ಸಂತ್ರಸ್ತರಿಗೆ ಮಾಸಾಶನವೂ ಸಿಗುತ್ತಿಲ್ಲ. ಕಳೆದ ಬಾರಿ ಮಾಸಾಶನ ಮೊತ್ತ ಏರಿಕೆಯಾಗಿದ್ದರೂ ಎಂಡೋ ಪೀಡಿತರಿಗೆ ಸಿಕ್ಕಿಲ್ಲವೆಂಬ ಆರೋಪವಿದೆ.
92 ಗ್ರಾಮ ಎಂಡೋ ಪೀಡಿತ
ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಸುಳ್ಯ ತಾಲೂಕುಗಳಲ್ಲಿ ಎಂಡೋ ಪೀಡಿತರಿರುವ 92 ಗ್ರಾಮಗಳನ್ನು ಗುರುತಿಸಿದ್ದು, 3,612 ಸಂತ್ರಸ್ತರಿದ್ದಾರೆ. 112 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಂಡೋ ಪೀಡಿತರ ಆರೈಕೆಗಾಗಿ ಜಿಲ್ಲೆಗೆ 8 ಪಾಲನ ಕೇಂದ್ರಗಳನ್ನು ನೀಡುವುದಾಗಿ ಸರಕಾರ ಹೇಳಿದ್ದರೂ ಬೆಳ್ತಂಗಡಿಯ ಕೊಕ್ಕಡ ಹಾಗೂ ಪುತ್ತೂರಿನ ಕೊಯಿಲದಲ್ಲಿ ಮಾತ್ರ ಇವೆ. ಉಜಿರೆಯಲ್ಲಿ ಪಾಲನ ಕೇಂದ್ರಕ್ಕೆ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದರೂ ಜಾರಿಗೊಂಡಿಲ್ಲ.
ಕೇರಳ ಸರಕಾರವು ಅಲ್ಲಿನ ಎಂಡೋ ಸಂತ್ರಸ್ತರಿಗೆ ಸ್ಮಾರ್ಟ್ ಕಾರ್ಡ್ ನೀಡಿದ್ದು, ಮಂಗಳೂರಿನ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಲಭ್ಯವಿದೆ. ಕರ್ನಾಟಕ ಸರಕಾರವು ಇಲ್ಲಿನ ಎಂಟು ಮೆಡಿಕಲ್ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಡ್ ವಿತರಿಸುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ. ದ.ಕ. ಜಿಲ್ಲಾಡಳಿತವು ಹಲವು ಸಭೆಗಳಲ್ಲಿ ಎಂಡೋ ಸಂತ್ರಸ್ತರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಹೇಳಿದ್ದರೂ ಅದಿನ್ನೂ ಸಂತ್ರಸ್ತರನ್ನು ಮುಟ್ಟಿಲ್ಲ.
ಪ್ರಮುಖವಾಗಿ ಶಾಶ್ವತ ಪುನರ್ವ ಸತಿ ಕೇಂದ್ರ, 5 ಲಕ್ಷ ರೂ. ಪರಿಹಾರ ಧನ ಪ್ರಮುಖ ಬೇಡಿಕೆ. ಸರಕಾರದ ಕೆಲವು ಸೌಲಭ್ಯಗಳಿಂದಾಗಿ ಕೆಲವು ಮಂದಿ ಸಂತ್ರಸ್ತರು ಎಸೆಸೆಲ್ಸಿ ಉತ್ತೀರ್ಣರಾಗಿದ್ದಾರೆ, ಒಂದಿಬ್ಬರು ನಡೆಯುವ ಸ್ಥಿತಿ ತಲುಪಿದ್ದಾರೆ. ಇನ್ನಷ್ಟು ಸೌಲಭ್ಯಗಳು ಸಿಕ್ಕಿದರೆ ಅವರ ನರಕಯಾತನೆ ಕಡಿಮೆಯಾಗಬಹುದು. ಕೇರಳದಂತೆ ನಮ್ಮ ಸರಕಾರವೂ ಪರಿಹಾರಕ್ಕೆ ಮುಂದಾಗಬೇಕು.
– ಶ್ರೀಧರ ಗೌಡ ಕೆಂಗುಡೇಲು ಎಂಡೋಪರ ಹೋರಾಟಗಾರ
ಸೌಲಭ್ಯಕ್ಕೆ ಪ್ರಾಮಾಣಿಕ ಪ್ರಯತ್ನ
ಬಜೆಟ್‌ನಲ್ಲಿ ಎಂಡೋ ಸಂತ್ರಸ್ತರಿಗೆ ಏನೂ ಕೊಡದಿರುವ ಕುರಿತು ನೋವಿದೆ. ಇವರಿಗೆ ಸೌಲಭ್ಯ ದೊರಕಿಸಿ ಕೊಡುವುದು ನನ್ನ ಮೊದಲ ಆದ್ಯತೆ, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ಹರೀಶ್ ಪೂಂಜಾ, ಶಾಸಕರು, ಬೆಳ್ತಂಗಡಿ
— ಕಿರಣ್ ಸರಪಾಡಿ