Advertisement

ತಾಲೂಕಿನಲ್ಲಿ ನೀರಿನ ಸಮಸ್ಯೆ ಉಲ್ಭಣ

01:03 PM Jul 10, 2019 | Team Udayavani |

ಉಮೇಶ ಬಳಬಟ್ಟಿ
ಇಂಡಿ:
ಬೇಸಿಗೆಯಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ ತಾಲೂಕಾಡಳಿತ ವತಿಯಿಂದ ಪೂರೈಸುತ್ತಿದ್ದ ಟ್ಯಾಂಕರ್‌ ನೀರು ಸ್ಥಗಿತಗೊಳಿಸಿದ್ದರಿಂದ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

Advertisement

ರಾಜ್ಯ ಸರಕಾರ ಕುಡಿಯುವ ನೀರು ಸಮಸ್ಯೆಯಾಗಬಾರದೆಂದು ನೀರು ಪೂರೈಕೆಗಾಗಿ ಸಾಕಷ್ಟು ಹಣ ತೆಗೆದಿರಿಸಿದೆಂದು ಹೇಳಲಾಗುತ್ತಿದೆ. ಆದರೆ ಜೂ. 30ರಂದು ಎಲ್ಲ ಗ್ರಾಪಂಗಳಲ್ಲಿ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸುವಂತೆ ತಾಲೂಕಾಡಳಿತ ಆದೇಶ ಹೊರಡಿಸಿದೆ. ಇದು ಸಮಸ್ಯೆ ಮತ್ತಷ್ಟು ಉದ್ಬವಿಸಲು ಕಾರಣವಾಗಿದೆ.

ಮಳೆಗಾಲ ಪ್ರಾರಂಭವಾಗಿದೆ. ಆದರೆ ಇಂಡಿ ತಾಲೂಕಿನಲ್ಲಿ ಮೇಘರಾಜ ಮಾತ್ರ ಪ್ರವೇಶ ಮಾಡಿಲ್ಲ. ಬರದ ನೆರಳಿನಲ್ಲಿಯೇ ಜನ ಇನ್ನೂ ಕಾಲ ಕಳೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲ್ಲಿ ಇದುವರೆಗೂ ಕುಡಿಯುವ ನೀರಿನ ತೊಂದರೆ ತಪ್ಪಿಲ್ಲ . ಈ ಹಿಂದೆ ಸರಕಾರ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಅಲ್ಪ ಸ್ವಲ್ಪವಾದರೂ ನೀರಿನ ಸಮಸ್ಯೆ ನಿವಾರಣೆಯಾಗಿತ್ತು. ಈಗ ಟ್ಯಾಂಕರ್‌ ಸ್ಥಗಿತಗೊಳಿಸಿದ್ದರಿಂದ ಮತ್ತೆ ನೀರಿನ ಸಮಸ್ಯೆ ಉಲ್ಬಣವಾಗಿದೆ.

ತಾಲೂಕಿನ 74 ಹಳ್ಳಿಗಳಲ್ಲಿ ಯಾವುದೇ ಗ್ರಾಮಗಳಲ್ಲಿ ಮೇಘರಾಜ ಕರುಣೆ ತೋರಿಲ್ಲ. ಇಲ್ಲಿವರೆಗೂ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ 700ರಿಂದ 1200 ಅಡಿ ಆಳದವರೆಗೆ ಬೋರ್‌ವೆಲ್ ಕೊರೆಸಿದರೂ ಹನಿ ನೀರು ಬಿದ್ದಿಲ್ಲ. ಜೂನ್‌ ಮುಗಿದು ಜುಲೈ ಪ್ರಾರಂಭವಾಗಿದ್ದರೂ ಸಮರ್ಪಕ ಮಳೆಯಿಲ್ಲ, ಹೀಗಿರುವಾಗ ಟ್ಯಾಂಕರ್‌ ಮೂಲಕ ವಿತರಣೆ ಮಾಡುತ್ತಿದ್ದ ನೀರು ಸ್ಥಗಿತಗೊಳಿಸಿದ್ದು ಯಾವ ಪುರು‚ಷಾರ್ಥಕ್ಕೆ ಎಂಬುವುದು ಗೊತ್ತಾಗುತ್ತಿಲ್ಲ.

ಅಧಿಕಾರಿಗಳು ಗಾಜಿನ ಮನೆಯಲ್ಲಿ ಕುಳಿತು ಮಳೆಗಾಲ ಆರಂಭವಾಗಿದೆ ನೀರು ಸ್ಥಗಿತಗೊಳಿಸಿ ಎಂದು ಆದೇಶ ಮಾಡಿದರೆ ಸಾರ್ವಜನಿಕರ ಪರಿಸ್ಥಿತಿ ಹೇಗೆ? ಸ್ಥಳೀಯವಾಗಿ ಸಮಸ್ಯೆ ಇಲ್ಲದೆ ಇದ್ದರೆ ಟ್ಯಾಂಕರ್‌ ನೀರು ಪೂರೈಸಿ ಎಂದು ಸಾರ್ವಜನಿಕರು ಹೇಳುತ್ತಿರುವುದಾದರೂ ಏಕೆ? ಕುಡಿಯಲು ನೀರು ಸಿಗದೆ ಗ್ರಾಮೀಣ ಭಾಗದ ಜನ ಕಂಗಾಲಾಗಿದ್ದಾರೆ. ಕೂಡಲೆ ಸರಕಾರ ಎಚ್ಚೆತ್ತು ಮತ್ತೆ ಗ್ರಾಮೀಣ ಭಾಗಗಳಲ್ಲಿ ಟ್ಯಾಂಕರ ಮೂಲಕ ನೀರು ವಿತರಣೆ ಮಾಡಬೇಕು ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next