ಇಂಡಿ: ದೈಹಿಕ, ಶಾರೀರಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಉತ್ತಮ ಆರೋಗ್ಯ ವೃದ್ಧಿಯಾಗಬೇಕಾದರೆ ಶಿಕ್ಷಣದ ಜೊತೆಯಲ್ಲಿ ದೈಹಿಕ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶುಕ್ರವಾರ ಪಟ್ಟಣದ ಅಂಜುಮನ್ ಕಾಲೇಜು ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಪಪೂ ಕಾಲೇಜುಗಳ ಗುಂಪು ಮತ್ತು ವೈಯಕ್ತಿಕ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ವ್ಯವಸ್ಥೆ ನಿಂತ ನೀರಲ್ಲ. ಅದು ಸದಾ ಪ್ರಹವಿಸುವಂತೆ ಶಾಲಾ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಅಂಜುಮನ್ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆ ಸ್ಥಾನ ಅಲಂಕರಿಸಿದ್ದು ಹೆಮ್ಮೆ ಸಂಗತಿ ಎಂದರು.
ಒಂದು ದೇಶದ ಪ್ರಗತಿ ಅಲ್ಲಿನ ಜನರ ಆರೋಗ್ಯ ಮಟ್ಟ ಸಹಿತ ಒಳಗೊಂಡಿರುತ್ತದೆ. ನಮ್ಮ ಪೂರ್ವಜರ ಗಟ್ಟಿತನ ಹಾಗೂ ಆಯುಷ್ಯಕ್ಕೆ ಅವರು ಸೇವಿಸುತ್ತಿದ್ದ ಆಹಾರ ಪಧಾರ್ಥಗಳೇ ಕಾರಣ. ಅಂದು ಜೈವಿಕ ಆಹಾರ ಸೇವಿಸಿ ದೈಹಿಕ ಕಸರತ್ತು ಮಾಡುವ ಮೂಲಕ ಶರೀರ ಗಟ್ಟಿಗೊಳಿಸುತ್ತಿದ್ದರು. ಇಂದು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ರಾಸಾಯನಿಕ ಸಿಂಪಡಿಸಿದ ಆಹಾರಗಳನ್ನು ಸೇವಿಸಿ ದೈಹಿಕತೆ ಖನ್ನವಾಗುತ್ತಿದೆ ಎಂದರು.
ಕಾಲೇಜು ಉಪ ನಿರ್ದೇಶಕ ಜೆ.ಎಸ್. ಪೂಜಾರಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನೂ ಸಮಾನವಾಗಿ ಸ್ವೀಲರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಒಳ್ಳೆ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಅಯೂಬ ಬಾಗವಾನ, ಜಹಾಂಗೀರ ಸೌದಾಗರ, ಅಬುಜರ ತಾಮಟಗಾರ, ಅಕೀಲ ಹವಾಲ್ದಾರ, ಅರಬ ಮಹಿಬೂಬ, ಹಾಜೀ, ಅಲಿಬ ಬಾಗವಾನ, ಜಾವೀದ್ ಮೋಮಿನ್, ಮುಸ್ತಾಕಹಮ್ಮದ್ ಇಂಡಿಕರ್, ಅಬ್ದುಲ್ಹಮೀದ್ ಮುಲ್ಲಾ, ಮುಕ್ತಾರ ಟಾಂಗೇವಾಲೆ, ಶಿವಾನಂದ ಮೂರಮನ್, ಅಸ್ಲಂ ಕಡಣಿ, ಶಬ್ಬಿರ್ ಖಾಜಿ, ನಬಿರಸೂಲ ಹವಾಲ್ದಾರ್, ಇಲಿಯಾಸ್ ಬೋರಾಮಣಿ, ಇಸ್ಮಾಯಿಲ್ ಅರಬ, ಅತೀಕ ಮೋಮಿನ್, ದೈಹಿಕ ಶಿಕ್ಷಕ ಎಚ್.ಎಂ. ಬಿಳ್ವಾರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಇದ್ದರು.
ಪ್ರಾಚಾರ್ಯ ಜೆ.ಡಿ. ಪೂಜಾರಿ ಸ್ವಾಗತಿಸಿದರು. ರೇಷ್ಮಾ ಪವಾರ ನಿರೂಪಿಸಿದರು. ಬಿ.ಎಸ್ ಗುರಿಕಾರ ವಂದಿಸಿದರು.