ಇಂಡಿ: ಇಂಡಿ ಪಟ್ಟಣಕ್ಕೆ ಒಂದೂವರೆ ತಿಂಗಳಾದರೂ ನಲ್ಲಿ ನೀರು ಪೂರೈಕೆಯಾಗದೆ ಜನತೆ ದಿನ ರಾತ್ರಿ ನೀರಿಗಾಗಿಯೇ ತಡಪಡಿಸುವಂತಾಗಿದೆ. ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಾಲೂಕಿನ 47 ಗ್ರಾಮಗಳಿಗೆ 272 ಟ್ಯಾಂಕರ್‌ಗಳ ಮೂಲಕ 761 ಟ್ರಿಪ್ ನೀರು ಗ್ರಾಮಗಳಿಗೆ ಪೂರೈಸುತ್ತಿದ್ದಾರೆ. ಆದರೆ ಈ ಭಾಗ್ಯ ಇಂಡಿ ಪಟ್ಟಣದ ಜನತೆಗೆ ಇಲ್ಲದಂತಾಗಿದೆ. ಉಳ್ಳವರಿಗೆ ಮನೆಯಲ್ಲಿಯೇ ಕೊಳವೆ ಬಾವಿಗಳಿವೆ. ಈ ತೊಂದರೆ ಮಧ್ಯಮ ವರ್ಗದ ಜನತೆಗೆ, ಕಡುಬಡವರಿಗೆ ಹೆಚ್ಚಾಗಿದೆ.
ಇಂಡಿ ತಾಲೂಕಿನಲ್ಲಿ ನೀರಿಗೆ ತೊಂದರೆಯಿದೆ. ಆದರೆ ಇಂಡಿಯಲ್ಲಿ ಕೊಳವೆ ಬಾವಿಗಳಿಗೆ ನೀರು ಇದೆ. ಇಂಡಿ ಪಟ್ಟಣದಿಂದಲೇ ನಿತ್ಯ ತಾಲೂಕಿನ ಅನೇಕ ಗ್ರಾಮಗಳಿಗೆ ನೀರು ಸಾಗಾಣಿಕೆಯಾಗುತ್ತದೆ. ಆದರೆ ಅವರು ನಿತ್ಯ ತೆಗೆದುಕೊಂಡು ಹೋಗುವವರಿಗೆ ನೀರು ಕೊಡುತ್ತಾರೆ ಎಂದಾದರೂ ಕೊಂಡು ಹೋಗುವವರಿಗೆ ಇದು ಸಹ ಕಷ್ಟ ಸಾಧ್ಯವಾದ ಸ್ಥಿತಿಯುಂಟಾಗಿದೆ.
ಹೀಗಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಸ್ಥಿತಿ ದೇವರೇ ಬಲ್ಲ. ಇತ್ತ ದುಡ್ಡು ಕೊಟ್ಟರೂ ಟ್ಯಾಂಕರ್‌ನವರು ನೀರು ಸಕಾಲಕ್ಕೆ ಹಾಕುತ್ತಿಲ್ಲ. ಹೀಗಾಗಿ ಜನತೆ ತೊಂದರೆ ಅನುಭವಿಸಿ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಶಾಪ ಹಾಕುತ್ತಿದ್ದಾರೆ.
ಪುರಸಭೆ ಅಧಿಕಾರಿಗಳು ಅಲ್ಲಲ್ಲಿ ಹೆಚ್ಚಿನ ಸಂಖ್ಯೆ ಕೊಳವೆ ಬಾವಿಗಳನ್ನು ಕೊರೆಸಿ ಅವುಗಳಿಗೆ ಮೋಟಾರು ಪಂಪ್‌ಸೆಟ್ ಅಳವಡಿಸಿ ನೀರು ಪೂರೈಸಬೇಕಾಗಿದೆ. ಇಲ್ಲವೇ ಕಾಲುವೆ ಮುಖಾಂತರ ಭೀಮಾ ನದಿಗೆ ನೀರು ಹರಿಸಿ ಭೀಮಾ ನದಿಯಿಂದ ನೀರು ಪೂರೈಸಬೇಕು. ಪಟ್ಟಣಕ್ಕೆ ನೀರು ಪೂರೈಕೆಯ ಇನ್ನೊಂದು ಮೂಲವಾದ ಲೋಣಿ ಕೆರೆ ಖಾಲಿಯಾಗಿದ್ದು ಅದನ್ನು ಕಾಲುವೆಯಿಂದ ನೀರು ಬಿಡಿಸಿ ತುಂಬಿಸಿ ಇಂಡಿ ಪಟ್ಟಣಕ್ಕೆ ನೀರು ಪೂರೈಸಬೇಕು. ಇದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
44 ದಿನಗಳಿಂದ ನಲ್ಲಿ ನೀರು ಬಂದಿಲ್ಲ. ಪುರಸಭೆಯವರಿಗೆ ಕೇಳಿದರೆ ಭೀಮಾ ನದಿಯಲ್ಲಿ ನೀರು ಇಲ್ಲ ನಾವು ಎಲ್ಲಿಂದ ನೀರು ಬಿಡಬೇಕು ಎಂದು ನಮ್ಮನ್ನೇ ಕೇಳುತ್ತಾರೆ. ಬೇಸಿಗೆಗೆ ಸಾಕಾಗುವಷ್ಟು ನೀರು ಶೇಖರಣೆ ಮಾಡಿಕೊಳ್ಳದೆ ಇರುವುದು ಪುರಸಭೆಯವರ ತಪ್ಪು. ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಿ.
•
ಅಶೋಕ ಯಡ್ರಾಮಿ, ನಾಗರಿಕ
ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾದ ಭೀಮಾ ನದಿಯಲ್ಲಿ ಹಾಗೂ ಲೋಣಿ ಕೆರೆಯಲ್ಲಿ ನೀರು ಖಾಲಿ ಆಗಿದ್ದು ನೀರು ಪೂರೈಸಲು ಮನವಿ ಮಾಡಲಾಗಿದೆ. ಭೀಮಾ ನದಿಗೆ ,ಲೋಣಿ ಕೆರೆಗೆ ನೀರು ಬರುವವರೆಗೆ ತೊಂದರೆಯಾಗುತ್ತದೆ. ಉಳಿದ ಮೂಲಗಳಿಂದಲೂ ನೀರು ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ.
•ಬಾಬುರಾವ್ ವಿಭೂತಿ,
ಪುರಸಭೆ ಮುಖ್ಯಾಧಿಕಾರಿ